ಬೆಂಗಳೂರು: ವಿಚ್ಛೇದಿತ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ದೈಹಿಕ ಸಂಬಂಧ ಬೆಳೆಸಿ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹೇಶ ಅಲಿಯಾಸ್ ಜಗನ್ನಾಥ್ ಬಂಧಿತ ಆರೋಪಿ ಎಂದು ಹೇಳಲಾಗಿದೆ. ವಿಜಯಪುರ ಮೂಲದ ಮಹೇಶ ಹಾಸನದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತ ವೈವಾಹಿಕ ಜಾಲತಾಣಗಳ ಮೂಲಕ ವಿಚ್ಛೇದಿತ ಮಹಿಳೆಯರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ವಂಚಿಸಿದ್ದಾನೆ.
ಶ್ರೀಮಂತನಂತೆ ಬಿಂಬಿಸಿಕೊಳ್ಳುತ್ತಿದ್ದ ಆರೋಪಿ, ಶ್ರೀಮಂತ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಹಣ ಪಡೆದು ದೈಹಿಕ ಸಂಬಂಧ ಬೆಳೆಸಿ ವಂಚಿಸುತ್ತಿದ್ದ. ಹೀಗೆ 10ಕ್ಕೂ ಹೆಚ್ಚು ವಿಚ್ಛೇದಿತ ಮಹಿಳೆಯರಿಂದ 25 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚಿಸಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ 5 ಮಹಿಳೆಯರೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾನೆ ಎನ್ನುವುದು ಗೊತ್ತಾಗಿದೆ.
ಬೆಂಗಳೂರು, ವಿಜಯಪುರ, ಹಾಸನ ಸೇರಿದಂತೆ ಹಲವೆಡೆ ವಿಚ್ಚೇದಿತ ಶ್ರೀಮಂತ ಮಹಿಳೆಯರಿಗೆ ವಂಚಿಸಿದ್ದಾನೆ. ಆರೋಪಿಯಿಂದ 6 ಲಕ್ಷ ರೂಪಾಯಿ ಬೆಲೆಯ ಕಾರ್, 2 ಮೊಬೈಲ್, 25 ಸಿಮ್ ಕಾರ್ಡ್, 22 ಎಟಿಎಂ ಕಾರ್ಡ್, ಮೂರು ಪಾನ್ ಕಾರ್ಡ್, ಮೂರು ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮೊದಲಾದವುಗಳನ್ನು ವಶಕ್ಕೆ ಪಡೆಯಲಾಗಿದೆ.
ಈತನ ಮಾತು ನಂಬಿ 7 ಲಕ್ಷ ರೂಪಾಯಿ ಹಣ ನೀಡಿ ವಂಚನೆಗೆ ಒಳಗಾದ ಮಹಿಳೆಯೊಬ್ಬರು ಬನಶಂಕರಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.