ನುಗ್ಗೆಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಮೊಳಕೆ ಬರಿಸಿದ ಹೆಸರುಕಾಳು ಕೂಡ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇವೆರಡನ್ನು ಸೇರಿಸಿ ರುಚಿಕರವಾದ ಪಲ್ಯ ಮಾಡಿದರೆ ಊಟದ ಜತೆ ಚೆನ್ನಾಗಿರುತ್ತದೆ. ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
¼ ಕಪ್ ಮೊಳಕೆ ಬರಿಸಿದ ಹೆಸರು ಕಾಳು, 1 ಕಟ್ಟು ನುಗ್ಗೆ ಸೊಪ್ಪು, ಈರುಳ್ಳಿ – ಸಣ್ಣಗೆ ಹೆಚ್ಚಿದ್ದು, ಸಾಸಿವೆ – 1 ಟೀ ಸ್ಪೂನ್, ಜೀರಿಗೆ – 1/2 ಟೀ ಸ್ಪೂನ್, ಎಣ್ಣೆ – 2 ಚಮಚ, ಒಣಮೆಣಸು – 3, ಇಂಗು – ಚಿಟಿಕೆ, ಕರಿಬೇವು – 10, ಉಪ್ಪು – ರುಚಿಗೆ ತಕ್ಕಷ್ಟು, ಕಾಯಿತುರಿ – 3 ಟೇಬಲ್ ಸ್ಪೂನ್, ಅರಿಶಿನ – ಚಿಟಿಕೆ.
ಮಾಡುವ ವಿಧಾನ:
ಮೊದಲಿಗೆ ನುಗ್ಗೆಸೊಪ್ಪಿನ ದಂಟಿನಿಂದ ಎಲೆಗಳನ್ನು ಬೇರ್ಪಡಿಸಿಕೊಂಡು ಎಲೆಗಳನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಿ. ನಂತರ ಒಂದು ಕುಕ್ಕರ್ ಗೆ 1 ಗ್ಲಾಸ್ ನೀರು ಹಾಕಿ ಅದರ ಒಳಗೆ ಒಂದು ಪಾತ್ರೆ ಇಟ್ಟು ಅದಕ್ಕೆ ಈ ಮೊಳಕೆ ಬರಿಸಿದ ಹೆಸರುಕಾಳು ಹಾಕಿ 3 ಟೇಬಲ್ ಸ್ಪೂನ್ ನೀರು ಸೇರಿಸಿ ಸ್ವಲ್ಪ ಉಪ್ಪು ಹಾಕಿ 1 ವಿಷಲ್ ಕೂಗಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಸಾಸಿವೆ, ಜೀರಿಗೆ ಹಾಕಿ ನಂತರ ಇಂಗು, ಒಣಮೆಣಸು ಸೇರಿಸಿ.
ನಂತರ ಈರುಳ್ಳಿ ಹಾಕಿ ಕೆಂಪಾಗುವವರೆಗೆ ಫ್ರೈ ಮಾಡಿ ಅರಿಶಿನ ಸೇರಿಸಿ ನುಗ್ಗೆ ಸೊಪ್ಪು ಹಾಕಿ 2 ನಿಮಿಷಗಳ ಕಾಲ ಬಾಡಿಸಿಕೊಳ್ಳಿ. ನಂತರ ಇದಕ್ಕೆ 4 ಟೇಬಲ್ ಸ್ಪೂನ್ ನಷ್ಟು ನೀರು ಸೇರಿಸಿ ಒಂದು ಪ್ಲೇಟ್ ಮುಚ್ಚಿ ಸ್ವಲ್ಪ ಬೇಯಿಸಿಕೊಳ್ಳಿ. ನಂತರ ಹೆಸರುಕಾಳು ಹಾಕಿ 2 ನಿಮಿಷಗಳ ಕಾಲ ಚೆನ್ನಾಗಿ ಬಾಡಿಸಿ. ಕೊನೆಗೆ ಕಾಯಿ ತುರಿ ಸೇರಿಸಿ ಚೆನ್ನಾಗಿ ಕೈಯಾಡಿಸಿ ಸ್ವಲ್ಪ ಹೊತ್ತು ಬೇಯಿಸಿದರೆ ರುಚಿಕರವಾದ ನುಗ್ಗೆಸೊಪ್ಪಿನ ಪಲ್ಯ ಸವಿಯಲು ಸಿದ್ಧ.