ಐಶಾರಾಮಿ ಇಲೆಕ್ಟ್ರಿಕ್ ಕಾರಿನಲ್ಲಿ ಪೆಟ್ರೋಲ್ ಬಂಕ್ ಗೆ ಬಂದ ವ್ಯಕ್ತಿಯೊಬ್ಬ ಕಾರಿನಲ್ಲಿ ಇಂಧನ ತುಂಬುವ ಟ್ಯಾಂಕ್ ಎಲ್ಲಿದೆ ಎಂದು ಹುಡುಕಾಡಿದ ಮೋಜಿನ ವಿಡಿಯೋ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ.
ಜಾದುಗಾರ ಜುಸ್ಟಿನ್ ಫ್ಲೋಮ್ ಎಂಬುವವರು ಫೇಸ್ ಬುಕ್ ನಲ್ಲಿ ಮೂರೂವರೆ ನಿಮಿಷದ ವಿಡಿಯೋ ಹಂಚಿಕೊಂಡಿದ್ದು, ಕೆಲವೇ ತಾಸಿನಲ್ಲಿ 55 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಟೆಸ್ಲಾ ಮಾಡೆಲ್ -3 ಇಲೆಕ್ಟ್ರಿಕ್ ಕಾರ್ ನಲ್ಲಿ ಬರುವ ವ್ಯಕ್ತಿ ಪೆಟ್ರೋಲ್ ಬಂಕ್ ಎದುರು ನಿಲ್ಲಿಸಿ ತನ್ನ ಫ್ಯೂಯಲ್ ಕಾರ್ಡ್ ನಿಂದ ಹಣ ಪಾವತಿಸಿ ಪೆಟ್ರೋಲ್ ತುಂಬಿಸಿಕೊಳ್ಳಲು ಪೈಪ್ ಹಿಡಿದು ಮುಂದಾಗುತ್ತಾರೆ. ಎಲ್ಲಿಯೂ ಪೆಟ್ರೋಲ್ ಟ್ಯಾಂಕ್ ನ ಹೋಲ್ ಕಾಣಿಸದು.
ಇಡೀ ಕಾರು ಸುತ್ತಿದರೂ ಪೆಟ್ರೋಲ್ ಹಾಕುವುದು ಎಲ್ಲಿ ಎಂದೇ ಕಾಣುತ್ತಿಲ್ಲ. ಅದಕ್ಕಾಗಿ ಡಿಕ್ಕಿ ತೆಗೆದು ಹುಡುಕುತ್ತಾನೆ, ಮುಂಬದಿ ಬಾನೆಟ್ ಎತ್ತಿ ನೋಡುತ್ತಾನೆ. ಇಷ್ಟಾಗಿಯೂ ಪೆಟ್ರೋಲ್ ಟ್ಯಾಂಕ್ ಎಲ್ಲಿದೆ ಎಂದು ಗುರುತಿಸಲಾಗದ ಕಾರಣ ತನ್ನ ಮೊಬೈಲ್ ತೆಗೆದು ಗೂಗಲ್ ಸರ್ಚ್ ಮಾಡಿ ನೋಡುತ್ತಾನೆ. ಅದು ಇಲೆಕ್ಟ್ರಿಕ್ ಕಾರು ಎಂಬುದು ಆತನಿಗೆ ಆಗ ಅರ್ಥವಾಗುತ್ತದೆ. ತನ್ನ ದಡ್ಡತನಕ್ಕೆ ತಾನೇ ಕಾಲು ಕುಟ್ಟಿ ಬೇಸರಿಸಿಕೊಂಡು ಕಾರು ಹತ್ತಿ ತೆರಳುತ್ತಾನೆ.
ಆತನ ಕಾರಿನ ಹಿಂದೆ ಪೆಟ್ರೋಲ್ ತುಂಬಿಸಲು ಬಂದು ನಿಂತ ಇನ್ನೊಂದು ಕಾರಿನಲ್ಲಿದ್ದವರು ಚಾಲಕನ ಪೇಚಿನ ಸನ್ನಿವೇಶವನ್ನು ಸಂಪೂರ್ಣ ವಿಡಿಯೋ ಮಾಡಿದ್ದಾರೆ. ಹಿಂಬದಿ ಕಾರಿನಲ್ಲಿ ಕುಳಿತ ಮೂವರು, ಚಾಲಕನ ಪರಿಸ್ಥಿತಿಯನ್ನು ಹೀಯಾಳಿಸುವ ಆಡಿಯೋ ಕೂಡ ಈ ವಿಡಿಯೋ ಜೊತೆಗಿದೆ. “ನೀವು ಜೋಕ್ ಮಾಡಿರುವುದು, ಸರಿಯಲ್ಲ. ವಿಡಿಯೋ ಮಾಡುವ ಬದಲು ಚಾಲಕನಿಗೆ ಸಹಾಯ ಮಾಡಬೇಕಿತ್ತು” ಎಂದು ಹಲವರು ಕಮೆಂಟ್ ಮಾಡಿದ್ದಾರೆ.
https://www.facebook.com/justinflomofficial/videos/888628478299721