ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಎಲ್ಲರ ಬದುಕನ್ನು ಮೂರಾಬಟ್ಟೆಯಾಗಿದೆ. ಶ್ರೀಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ, ಬೀದಿ ವ್ಯಾಪಾರಿಗಳಿಂದ ಹಿಡಿದು ಬೃಹತ್ ಉದ್ಯಮಿಗಳವರೆಗೆ ಬಹುತೇಕ ಎಲ್ಲರೂ ಸಂಕಷ್ಟ ಅನುಭವಿಸುತ್ತಿದ್ದಾರೆ.
ಭಾರತದಲ್ಲಿ ಕೊರೊನಾ ಸೋಂಕು ದಿನೇ ದಿನೇ ವ್ಯಾಪಕವಾಗುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಈ ಮೊದಲು ಸುದೀರ್ಘ ಕಾಲದವರೆಗೆ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಇದೀಗ ಲಾಕ್ ಡೌನ್ ಸಡಿಲಿಕೆ ಮಾಡಿ ವ್ಯಾಪಾರ ವಹಿವಾಟುಗಳಿಗೆ ಅನುವು ಮಾಡಿಕೊಟ್ಟಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಇದು ಸಾಧ್ಯವಾಗುತ್ತಿಲ್ಲ.
ಇದರ ಮಧ್ಯೆ ಅಖಿಲ ಭಾರತ ವರ್ತಕರ ಒಕ್ಕೂಟ ಬೆಚ್ಚಿಬೀಳಿಸುವ ಸಂಗತಿಯೊಂದನ್ನು ತಿಳಿಸಿದ್ದು, ನೂರು ದಿನಗಳಲ್ಲಿ ದೇಶದ ಚಿಲ್ಲರೆ ವ್ಯಾಪಾರವು ಬರೋಬ್ಬರಿ 15.5 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದಿದೆ. ಕೆಲಸಗಾರರ ಕೊರತೆ, ಬೇಡಿಕೆ ಇಲ್ಲದಿರುವುದು ಹಾಗೂ ಆರ್ಥಿಕ ಸಂಕಷ್ಟ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಜೊತೆಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಯಾವುದೇ ಬೆಂಬಲ ನೀಡದಿರುವುದೂ ಕೂಡ ಮತ್ತೊಂದು ಕಾರಣವಾಗಿದೆ.