ಇಡೀ ದೇಶದ ಗಮನ ಸೆಳೆದಿರುವ ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣ ದಿನಕ್ಕೊಂದು ಸ್ಪೋಟಕ ತಿರುವು ಪಡೆದುಕೊಳ್ಳುತ್ತಿದೆ. 2 ವಾರಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 30 ಕೆಜಿ ಚಿನ್ನ ವಶಪಡಿಸಿಕೊಂಡಿದ್ದು, ಇದೀಗ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾದಳ (ಎನ್ಐಎ) ನಡೆಸುತ್ತಿದೆ.
ಯುಎಇ ರಾಯಭಾರಿ ಕಚೇರಿ ರಕ್ಷಣೆಯ ಹೆಸರಿನಲ್ಲಿ ಈ ಕಳ್ಳ ದಂಧೆ ನಡೆಯುತ್ತಿತ್ತೆಂದು ಹೇಳಲಾಗಿದ್ದು, ಕೇರಳ ಮುಖ್ಯಮಂತ್ರಿ ಕಚೇರಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿ ಹೆಸರು ಇದರಲ್ಲಿ ಕೇಳಿಬಂದಿದೆ. ಈಗ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಎಂಬಾಕೆಯನ್ನು ಬೆಂಗಳೂರಿನಲ್ಲಿ ಬಂಧಿಸಿ ರಾಷ್ಟ್ರೀಯ ತನಿಖಾದಳ ವಿಚಾರಣೆ ನಡೆಸುತ್ತಿದೆ.
ವಿಚಾರಣೆ ವೇಳೆ ಬೆಚ್ಚಿ ಬೀಳಿಸುವಂತಹ ಮಾಹಿತಿಗಳು ಬಹಿರಂಗವಾಗಿದೆ ಎನ್ನಲಾಗಿದ್ದು, ಇವರುಗಳ ತಂಡ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 230 ಕೆಜಿ ಚಿನ್ನವನ್ನು ದೇಶದೊಳಗೆ ಕಳ್ಳಸಾಗಾಣೆ ಮಾಡಿದೆ ಎಂದು ತಿಳಿದು ಬಂದಿದೆ. ಸ್ವಪ್ನಾ ಸುರೇಶ್ ಮತ್ತಾಕೆಯ ಸಹಚರರ ವಿಚಾರಣೆಯನ್ನು ತೀವ್ರಗೊಳಿಸಿದ್ದು, ಚಿನ್ನವನ್ನು ವಶಕ್ಕೆ ಪಡೆಯುವ ಕಾರ್ಯ ನಡೆಯುತ್ತಿದೆ.