ದಾವಣಗೆರೆ ಜಿಲ್ಲೆಯ ಶ್ವಾನದಳದಲ್ಲಿರುವ 9 ವರ್ಷದ ಶ್ವಾನವೊಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಲು ಸತತವಾಗಿ ಮೂರು ಗಂಟೆ ಕಾಲ 12 ಕಿಮೀ ದೂರ ಓಡಿ ಕೊಲೆಗಾರನನ್ನು ಪತ್ತೆ ಹಚ್ಚಿರುವ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆಯ ಬಸವಪಟ್ಟಣದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ವರ್ಷದ ಶ್ವಾನ, ತನಿಖಾಧಿಕಾರಿಗಳೊಂದಿಗೆ ತೆರಳಿತ್ತು. ಬಸವಪಟ್ಟಣದ ಕಾಶಿಪುರ ಗ್ರಾಮದಲ್ಲಿ ಚೇತನ್ ಎನ್ನುವ ಆರೋಪಿ ಎರಡು ದಿನಗಳ ಕಾಲ ಅಡಗಿ ಕೂತಿದ್ದ. ಈತನನ್ನು ಡಾಬರ್‌ಮ್ಯಾನ್ ಪ್ರಬೇಧದ ಶ್ವಾನ ವಾಸನೆಯ ಜಾಡು ಹಿಡಿದು ಓಡಿದೆ. ಸುಮಾರು 12 ಕಿಮೀ ಕ್ರಮಿಸಿದ ಬಳಿಕ ಆರೋಪಿ ಸಿಕ್ಕಿದ್ದಾನೆ ಎಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ.
ಜುಲೈ 16ರಂದು ಚೇತನ್ ತನ್ನ ಸ್ನೇಹಿತ ಚಂದ್ರನಾಯಕ್ ಎನ್ನುವವರನ್ನು ಕೊಲೆ ಮಾಡಿ ಆಭರಣವನ್ನು ತೆಗೆದುಕೊಂಡು ಪರಾರಿಯಾಗಿದ್ದ. ಘಟನಾ ಸ್ಥಳಕ್ಕೆ ತುಂಗಾಳನ್ನು ಪೊಲೀಸರು ಕರೆದುಕೊಂಡು ಹೋಗಿದ್ದರು. ಆ ವಾಸನೆಯ ಜಾಡು ಹಿಡಿದು 12 ಕಿಮೀ ಓಡಿದೆ. ಸಹಜವಾಗಿ ಅಪರಾಧ ಕೃತ್ಯ ನಡೆದ ಸ್ಥಳದಿಂದ 4-5 ಕಿಮೀ ಓಡುತ್ತವೆ. ಆದರೆ ಈ ಶ್ವಾನ ಇಷ್ಟು ದೂರ ಕ್ರಮಿಸಿ ಪತ್ತೆಹಚ್ಚಿರುವುದು ಅಚ್ಚರಿಗೆ ಕಾರಣವಾಗಿದೆ.
ಅಪರಾಧ ನಡೆದ ಸ್ಥಳಕ್ಕೆ ತುಂಗಾ ತರಬೇತುದಾರ ಪ್ರಕಾಶ್ ಕರೆದುಕೊಂಡು ಹೋದಾಗ, ಅಲ್ಲಿಂದ ಕಾಶಿಪುರಕ್ಕೆ ಹೋಗಿ ಅಲ್ಲಿ ವೈನ್ ಶಾಪ್ ಬಳಿ ನಿಂತು, ಬಳಿಕ ಹೋಟೆಲ್ ಬಳಿ ತೆರಳಿ ಅಲ್ಲಿಂದ ಆರೋಪಿಯಿದ್ದ ಮನೆಯ ಮುಂದೆ ಶ್ವಾನ ನಿಂತಿದೆ ಎಂದು ತಿಳಿದುಬಂದಿದೆ.