ಧೂಮಕೇತುವೊಂದು ಸೂರ್ಯನ ಹತ್ತಿರ ಹಾದು ಹೋಗುತ್ತಿದ್ದು, ನಾವು ಬರಿಗಣ್ಣಿನಲ್ಲೇ ಅದನ್ನು ನೋಡಬಹುದಾಗಿದೆ.
ಜುಲೈ 22 ಹಾಗೂ 23 ರಂದು ಖಗೋಳ ಶಾಸ್ತ್ರದ ಆಸಕ್ತರಿಗೆ ಈ ಅಪರೂಪದ ಅವಕಾಶ ಸಿಗಲಿದೆ. ಭೂಮಿಯ ಉತ್ತರ ಗೋಳಾರ್ಧದ ವಾಸಿಗಳಾಗಿದ್ದರೆ ಎರಡು ದಿನ ವಿಳಂಬವಾಗಿ ಧೂಮಕೇತು ಕಾಣಿಸಿಕೊಳ್ಳಲಿದೆ.
ಜು.22 ಅಥವಾ 23 ರಂದು ಸೂರ್ಯಾಸ್ತದ 45 ನಿಮಿಷದ ನಂತರ ತಾರೆಗಳ ಉದಯವಾಗುತ್ತಿದ್ದಂತೆ ನೈರುತ್ಯ ದಿಕ್ಕಿನಲ್ಲಿ ಧೂಮಕೇತು ಕಾಣಿಸಲಿದೆ. ಎದುರಿಗೆ ಅಸ್ಪಷ್ಟವಾದ ನಕ್ಷತ್ರ ಆಕಾರ ಹೊಂದಿದ್ದು, ಹಿಂದೆ ಬಾಲದ ಆಕೃತಿ ಕಾಣಲಿದೆ.
ದೂರದರ್ಶಕದಲ್ಲಿ ನೋಡಿದರೆ, ಇನ್ನೂ ಸ್ವಲ್ಪ ಸ್ಪಷ್ಟವಾಗಿ, ಟೆಲಿಸ್ಕೋಪ್ ನಿಂದ ನೋಡಿದರೆ ಸಂಪೂರ್ಣ ಸ್ಪಷ್ಟವಾಗಿ ಧೂಮಕೇತು ಗೋಚರಿಸಲಿದೆ ಎಂದು ನಿಯೋವೈಸ್ ಎಂಬ ಟೆಲಿಸ್ಕೋಪ್ ಸಂಶೋಧಕ ಜಿಯೊ ಮಾಸಿರೊ ತಿಳಿಸಿದ್ದಾರೆ ಎಂದು ಸ್ಪೇಸ್ ಡಾಟ್ ಕಾಂ ವರದಿ ಮಾಡಿದೆ.
ನಾಸಾ ಹೆಸರಿಟ್ಟಿರುವ ನಿಯೋವೈಸ್ ಟೆಲಿಸ್ಕೋಪ್ (ನಿಯರ್ ಅರ್ಥ್, ಆಬ್ಜೆಕ್ಟಿವ್, ವೈಡ್ ಫೀಲ್ಡ್ ಇನ್ಫ್ರಾರೆಡ್ ಸರ್ವೇ ಎಕ್ಸ್‌ಪ್ಲೋರರ್)ನಲ್ಲಿ ಮೊದಲು ಆ ಧೂಮಕೇತುವನ್ನು ಮಾರ್ಚ್ ನಲ್ಲಿ, ನಂತರ ಜುಲೈ 3 ರಂದು ಸೂರ್ಯನ ಬಳಿ ತೆರಳುತ್ತಿರುವುದನ್ನು ಗುರುತಿಸಲಾಯಿತು.
ಧೂಮಕೇತು ಸೂರ್ಯನ ಇನ್ನಷ್ಟು ಹತ್ತಿರಕ್ಕೆ ಹೋಗುತ್ತಿದ್ದಂತೆ ಅದರ ಮಂಜುಮಿಶ್ರಿತ ಮೇಲಿನ ಪದರ ಸುಟ್ಟು ಸ್ಪೋಟಗೊಂಡು ಅದರ ಧೂಳು ಹಾಗೂ ಅನಿಲ ಎಲ್ಲೆಡೆ ಹರಡಿಕೊಳ್ಳಲಿದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.