ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಕೋವಿಡ್ -19 ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗಿದೆ.
ಕೋವಿಡ್ -19 ರೋಗಿಗಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆ ಒದಗಿಸಲಾಗುವುದು. ಬಿಪಿಎಲ್ ಮತ್ತು ಎಪಿಎಲ್ ವರ್ಗದವರು, ವಲಸೆ ಕಾರ್ಮಿಕರು ಹಾಗೂ ಪಡಿತರ ಚೀಟಿ ಹೊಂದಿಲ್ಲದ ಅಂತರಾಜ್ಯದಿಂದ ಮರಳಿದವರು ಸೇರಿದಂತೆ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಎಲ್ಲ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಸಂಪೂರ್ಣ ಉಚಿತವಾಗಿರುತ್ತದೆ.
ಕೋವಿಡ್ ರೋಗಿಗಳು ಖಾಸಗಿ ಆಸ್ಪತ್ರೆ ಕೋಟಾದಲ್ಲಿ ಚಿಕಿತ್ಸೆ ಪಡೆಯಲು ಇಚ್ಛಿಸಿದಲ್ಲಿ ಸರ್ಕಾರವು ನಿಗದಿಪಡಿಸಿರುವ ಚಿಕಿತ್ಸೆ ವೆಚ್ಚವನ್ನು ಭರಿಸಬೇಕಾಗುತ್ತದೆ. ಚಿಕಿತ್ಸಾ ದರ ದಿನಕ್ಕೆ ಜನರಲ್ ವಾರ್ಡ್ ಗೆ 10,000 ರೂ., ಹೆಚ್.ಡಿ.ಯು. 12,000 ರೂ., ಐಸೋಲೇಷನ್ ಐಸಿಯು ವೆಂಟಿಲೇಟರ್ ಇಲ್ಲದೆ 15,000 ರೂ., ಐಸೋಲೇಷನ್ ಐಸಿಯು ವೆಂಟಿಲೇಟರ್ ಸಹಿತ 25,000 ರೂ. ಸರ್ಕಾರ ನಿಗದಿಪಡಿಸಿರುವ ಈ ದರಗಳಿಗಿಂತ ಹೆಚ್ಚು ಪಾವತಿಸಬೇಕಾಗಿಲ್ಲ ಎಂದು ಹೇಳಲಾಗಿದೆ.
ಆಸ್ಪತ್ರೆಗೆ ದಾಖಲಾಗಲು 108 ಅಂಬುಲೆನ್ಸ್ ಗೆ ಕರೆ ಮಾಡಬಹುದು. ಕೋವಿಡ್ ರೋಗಿಯನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳು ನಿರಾಕರಿಸಿದಲ್ಲಿ 1912 ಕರೆ ಮಾಡಬಹುದು. ಮಾಹಿತಿಗಾಗಿ ಆರೋಗ್ಯ ಸಹಾಯವಾಣಿ 104 ಸಂಪರ್ಕಿಸಬಹುದು ಎನ್ನಲಾಗಿದೆ.