ಸೋರೆಕಾಯಿ ಇಡ್ಲಿ, ದೋಸೆ, ಪಲ್ಯ ಮಾಡಿಕೊಂಡು ಸವಿದಿರುತ್ತಿರಿ. ಇದರಿಂದ ರುಚಿಕರವಾದ ಬರ್ಫಿ ಕೂಡ ಮಾಡಿಕೊಂಡು ಸವಿಯಬಹುದು. ತಿನ್ನುವುದಕ್ಕೆ ತುಂಬಾ ರುಚಿಕರವಾಗಿರುತ್ತದೆ ಇದರ ಬರ್ಫಿ. ಮಾಡುವುದು ಕೂಡ ಸುಲಭವಿದೆ.
ಬೇಕಾಗುವ ಸಾಮಗ್ರಿಗಳು:
1 ½ ಕಪ್ ಸೋರೆಕಾಯಿ, ತೆಂಗಿನಕಾಯಿ ತುರಿ 1 ½ ಕಪ್, ಸಕ್ಕರೆ – 1 ½ ಕಪ್, ಏಲಕ್ಕಿ ಪುಡಿ ಚಿಟಿಕೆ, ತುಪ್ಪ – 3 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಮೊದಲಿಗೆ ಸೋರೆಕಾಯಿ ಸಿಪ್ಪೆ ತೆಗೆದು ಎರಡು ಭಾಗ ಮಾಡಿಕೊಳ್ಳಿ. ಒಳಗಿರುವ ಬೀಜ ತೆಗೆದು ಸೋರೆಕಾಯಿಯನ್ನು ತುರಿದುಕೊಳ್ಳಿ. ನಂತರ ಒಂದು ಬಾಣಲೆಗೆ ಸೋರೆಕಾಯಿ ತುರಿ, ಸಕ್ಕರೆ, ತೆಂಗಿನಕಾಯಿ ಇವಿಷ್ಟನ್ನೂ ಹಾಕಿ ಹದ ಉರಿಯಲ್ಲಿ ಬೇಯಲು ಇಡಿ. ಸಕ್ಕರೆ ಕರಗಿ ನೀರಾಗುತ್ತದೆ. ಇದರಲ್ಲಿಯೇ ಸೋರೆಕಾಯಿ ಚೆನ್ನಾಗಿ ಬೇಯಲಿ. ಆಗಾಗ ಕೈಯಾಡಿಸುತ್ತಾ ಇರಿ.
ಈ ಮಿಶ್ರಣ ತುಸು ಗಟ್ಟಿಯಾಗುತ್ತಾ ಬರುತ್ತಿದ್ದಂತೆ ಇದಕ್ಕೆ 2 ಟೇಬಲ್ ಸ್ಪೂನ್ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣ ತಳ ಬಿಡುವವರಗೆ ಕೈಯಾಡಿಸಿ. ನಂತರ 1 ಟೇಬಲ್ ಸ್ಪೂನ್ ತುಪ್ಪ ಸೇರಿಸಿ ಮಿಕ್ಸ್ ಮಾಡಿ. ತಳ ಬಿಡುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ಒಂದು ತಟ್ಟೆಗೆ ತುಪ್ಪ ಸವರಿ ಅದಕ್ಕೆ ಈ ಮಿಶ್ರಣ ಹಾಕಿ. ಇದು ತಣ್ಣಗಾದ ಮೇಲೆ ಬರ್ಫಿ ಆಕಾರದಲ್ಲಿ ಕತ್ತರಿಸಿ ಸವಿಯಿರಿ.