ದಿನಾ ದೋಸೆ, ಇಡ್ಲಿ ತಿಂದು ಬೇಜಾರು ಎಂದುಕೊಂಡವರು ಒಮ್ಮೆ ಈ ಪುಳಿಯೋಗರೆ ಪೌಡರ್ ಮಾಡಿಟ್ಟುಕೊಳ್ಳಿ. ಇದನ್ನು ಮಾಡಿ ಒಂದು ಗಾಳಿಯಾಡದ ಡಬ್ಬಕ್ಕೆ ಹಾಕಿ ಇಟ್ಟುಕೊಂಡರೆ ಪುಳಿಯೋಗರೆ ತಿನ್ನಬೇಕು ಅನಿಸಿದಾಗೆಲ್ಲಾ ಮಾಡಿಕೊಂಡು ತಿನ್ನಬಹುದು.
ಬೇಕಾಗುವ ಸಾಮಾಗ್ರಿಗಳು:
ಹುಣಸೆಹಣ್ಣು – ಲಿಂಬೆ ಹಣ್ಣು ಗಾತ್ರದಷ್ಟು, 4 ಟೀ ಸ್ಪೂನ್ ಜೀರಿಗೆ, 2 ಟೀ ಸ್ಪೂನ್ – ಧನಿಯಾ, 1 ಟೀ ಸ್ಪೂನ್ – ಸಾಸಿವೆ, ಸ್ವಲ್ಪ – ಮೆಂತೆ, 1 ಟೀ ಸ್ಪೂನ್ – ಕಾಳುಮೆಣಸು, 2 ಟೇಬಲ್ ಸ್ಪೂನ್ – ಕಪ್ಪು ಎಳ್ಳು, 1 ಟೇಬಲ್ ಸ್ಪೂನ್ – ಕಡಲೆಬೇಳೆ, ಮೆಣಸು – 8, ಬೆಲ್ಲ – 4 ಟೇಬಲ್ ಸ್ಪೂನ್, ಅರಿಶಿನ – ಚಿಟಿಕೆ, ಇಂಗು – ಚಿಟಿಕೆ, ಎಣ್ಣೆ – 2 ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಹುಣಸೆಹಣ್ಣನ್ನು ಒಂದು ಬಾಣಲೆಗೆ ಹಾಕಿ ಸ್ವಲ್ಪ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ತುಸು ಬಿಸಿಯಾಗುವವರೆಗೆ ಹುರಿದುಕೊಂಡು ಎತ್ತಿಟ್ಟುಕೊಳ್ಳಿ. ನಂತರ ಅದೇ ಬಾಣಲೆಗೆ ಕಡಲೆಬೇಳೆ ಹಾಕಿ ಹುರಿದುಕೊಂಡು ಎತ್ತಿಟ್ಟುಕೊಳ್ಳಿ.
ಇದಾದ ನಂತರ ಸಾಸಿವೆ, ಮೆಂತೆ, ಜೀರಿಗೆ, ಎಳ್ಳು ಇವೆಲ್ಲವನ್ನು ಬೇರೆ ಬೇರೆಯಾಗಿ ಹುರಿದುಕೊಳ್ಳಿ. ಎಳ್ಳು ಹಾಗೂ ಕಡಲೆಬೇಳೆಯನ್ನು ಬೇರೆಯಾಗಿಯೇ ಎತ್ತಿಡಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾಳುಮೆಣಸು, ಇಂಗು, ಮೆಣಸು, ಧನಿಯಾ ಹಾಕಿ ಹುರಿದುಕೊಳ್ಳಿ.
ನಂತರ ಒಂದು ಮಿಕ್ಸಿ ಜಾರಿಗೆ ಹುರಿದಿಟ್ಟುಕೊಂಡ ಹುಣಸೆಹಣ್ಣು ಹಾಕಿ ಬಳಿಕ ಕಡಲೆಬೇಳೆ ಸೇರಿಸಿ ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡು ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಿ.
ಮಿಕ್ಸಿ ಜಾರಿನಲ್ಲಿ ಎಳ್ಳನ್ನು ಬಿಟ್ಟು ಉಳಿದ ಸಾಮಾಗ್ರಿಗಳನ್ನು ಸೇರಿಸಿ ಪುಡಿ ಮಾಡಿ ನಂತರ ಇದಕ್ಕೆ ಬೆಲ್ಲ, ಉಪ್ಪು,ಹುಣಸೆಹಣ್ಣಿನ ಪುಡಿ ಸೇರಿಸಿ ಮಿಕ್ಸಿ ಮಾಡಿ. ನಂತರ ಎಳ್ಳನ್ನು ಹಾಕಿ ತರಿ ತರಿಯಾಗಿ ಪುಡಿ ಮಾಡಿಕೊಂಡು ಸ್ಟೋರ್ ಮಾಡಿಕೊಳ್ಳಿ.