ಅಂತೂ ಡೆಕನ್ ಕ್ರಾನಿಕಲ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ಸಂಸ್ಥೆ ಹಾಗೂ ಬಿಸಿಸಿಐ ವಿರುದ್ಧ ನಡೆಸಿದ್ದ ಕಾನೂನು ಸಮರ ಅಂತ್ಯಗೊಂಡಿದೆ. 2012ರಿಂದಲೂ ಕಾನೂನಿನ ಹೋರಾಟ ಮುಂದುವರೆದಿತ್ತು. ಇದೀಗ ಈ ಹೋರಾಟಕ್ಕೆ ಅಂತ್ಯ ಸಿಕ್ಕಿದೆ. ಕಾನೂನು ಹೋರಾಟದಲ್ಲಿ ಡೆಕನ್ ಕ್ರೋನಿಕಲ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ಸಂಸ್ಥೆಗೆ ಜಯ ಸಿಗುವ ಸಾಧ್ಯತೆ ಇದೆ.
ಹೌದು, 2012ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡವನ್ನು ಬಿಸಿಸಿಐ ಕೈಬಿಟ್ಟಿತ್ತು. ಇದನ್ನು ಪ್ರಶ್ನಿಸಿ, ಡಿಸಿಎಚ್‌ಎಲ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಮಧ್ಯಸ್ಥಿಕೆ ವಹಿಸಲು ಆರ್ಬಿಟ್ರೇಟರ್ ಆಗಿ ನಿವೃತ್ತ ನ್ಯಾಯಮೂರ್ತಿ ಸಿ.ಕೆ. ಥಕ್ಕರ್‌ರನ್ನ ನೇಮಕ ಮಾಡಲಾಗಿತ್ತು.
ಈ ವಾದ – ವಿವಾದದಲ್ಲಿ ಬಿಸಿಸಿಐನ ನಡುವಳಿಕೆ ತಪ್ಪು ಎಂಬ ತೀರ್ಮಾನ ಮಾಡಲಾಗಿದ್ದು, ಡೆಕ್ಕನ್ ಕ್ರೋನಿಕಲ್ ಸಂಸ್ಥೆಗೆ ನಷ್ಟ ತುಂಬಿಕೊಡುವಂತೆ ಆರ್ಬಿಟ್ರೇಟರ್ ತೀರ್ಪು ಪ್ರಕಟಿಸಿದೆ. ಹೀಗಾಗಿ ಬಿಸಿಸಿಐಗೆ ಭಾರೀ ದಂಡ ಹೇರುವ ಸಾಧ್ಯತೆ ಇದೆ. ಅಲ್ಲದೆ ತಂಡಕ್ಕೆ 4,814.67 ಕೋಟಿ ರೂ. ಪರಿಹಾರ ಮೊತ್ತವನ್ನು ಶೇ. 10ರಷ್ಟು ಬಡ್ಡಿಯಂತೆ ನೀಡಬೇಕು ಹಾಗೂ ವಿಚಾರಣೆಗಾಗಿ ತಂಡ ಖರ್ಚು ಮಾಡಿರುವ 50 ಲಕ್ಷ ರೂ.ಗಳನ್ನು ಬಿಸಿಸಿಐ ಭರಿಸಬೇಕು ಎಂದು ತೀರ್ಪು ಬಂದಿದೆಯಂತೆ.