ಪನ್ನೀರ್ ನಲ್ಲಿ ಸಾಕಷ್ಟು ಬಗೆಯ ಅಡುಗೆಗಳನ್ನು ಮಾಡಿಕೊಂಡು ಸವಿಯಬಹುದು. ಇದರಿಂದ ಮಾಡುವ ಅಡುಗೆ ಕೂಡ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಪನ್ನೀರ್ ಬಳಸಿ ಮಾಡಬಹುದಾದ ಬಿರಿಯಾನಿ ಇದೆ. ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
2 ಕಪ್ ಬಾಸುಮತಿ ಅಕ್ಕಿ, 250 ಗ್ರಾಂ ಪನ್ನೀರ್, ಟೊಮೆಟೊ – 4 ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ, ಈರುಳ್ಳಿ – 2 ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, 1 ಇಂಚು ಶುಂಠಿ, ಹಸಿಮೆಣಸು – 2, ½ ಟೀ ಸ್ಪೂನ್ – ಖಾರದ ಪುಡಿ, 1 ಟೀ ಸ್ಪೂನ್ – ಅರಿಶಿನ ಪುಡಿ, 1 ಟೀ ಸ್ಪೂನ್ – ಧನಿಯಾ ಪುಡಿ, 3 – ಲವಂಗ, ಚಕ್ಕೆ – 1 ತುಂಡು, ಏಲಕ್ಕಿ – 2, ಪಲಾವ್ ಎಲೆ – 2, 1 ಟೀ ಸ್ಪೂನ್ – ಕಾಳುಮೆಣಸು, 2 ಟೇಬಲ್ ಸ್ಪೂನ್ – ಪುದೀನಾ ಸೊಪ್ಪು, 2 ಟೇಬಲ್ ಸ್ಪೂನ್ – ತುಪ್ಪ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ – 2 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಅಕ್ಕಿಯನ್ನು ಚೆನ್ನಾಗಿ ತೊಳೆದು ½ ಗಂಟೆ ನೀರಿನಲ್ಲಿ ನೆನೆಸಿಡಿ. ಒಂದು ಮಿಕ್ಸಿ ಜಾರಿಗೆ ಶುಂಠಿ – ಬೆಳ್ಳುಳ್ಳಿ , ಹಸಿಮೆಣಸು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಏಲಕ್ಕಿ, ಲವಂಗ, ಕಾಳುಮೆಣಸು, ಚಕ್ಕೆ, ಇವುಗಳನ್ನು ಪುಡಿ ಮಾಡಿಕೊಳ್ಳಿ.
ಒಂದು ಕುಕ್ಕರ್ ಗೆ ತುಪ್ಪ ಹಾಕಿ ಅದು ಬಿಸಿಯಾಗುತ್ತಲೇ ಅದಕ್ಕೆ ಈರುಳ್ಳಿ ಹಾಕಿ ಕೈಯಾಡಿಸಿ ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಮಿಕ್ಸ್ ಮಾಡಿ. ನಂತರ ಟೊಮೆಟೊ ಸೇರಿಸಿ ಇದು ಮೆತ್ತಗಾಗುವವರೆಗೆ ಮಿಕ್ಸ್ ಮಾಡಿ. ನಂತರ ಇದಕ್ಕೆ ಪಲಾವ್ ಎಲೆ, ಅರಿಶಿನ ಪುಡಿ, ಖಾರದ ಪುಡಿ, ಮಾಡಿಟ್ಟುಕೊಂಡ ಮಸಾಲೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದು ಪರಿಮಳ ಬರುತ್ತಿದ್ದಂತೆ ಕತ್ತರಿಸಿದ ಪುದೀನಾ ಸೊಪ್ಪು ಹಾಕಿ ನೆನೆಸಿಟ್ಟ ಅಕ್ಕಿ ಸೇರಿಸಿ 3 ಕಪ್ ನೀರು ಹಾಕಿ. ನಂತರ ಪನ್ನೀರ್ ಅನ್ನು ಚಿಕ್ಕದ್ದಾಗಿ ಕತ್ತರಿಸಿಕೊಂಡು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 1 ವಿಷಲ್ ಕೂಗಿಸಿಕೊಳ್ಳಿ. ನಂತರ ಸರ್ವ್ ಮಾಡಿ.