ನವದೆಹಲಿ: ಮುಂದಿನ ಐದು ವರ್ಷಗಳ ಅವಧಿಗೆ ವೇತನ ರಹಿತ ಕಡ್ಡಾಯ ರಜೆ(ಎಲ್ ಡಬ್ಲ್ಯುಪಿ)ಯ ಮೇಲೆ ಕಳಿಸಬಹುದಾದ ನೌಕರರ ಪಟ್ಟಿಯನ್ನು ಸಿದ್ಧ ಮಾಡಲು ಏರ್ ಇಂಡಿಯಾ ಮುಂದಾಗಿದೆ.
ನೌಕರರ ದಕ್ಷತೆ, ಆರೋಗ್ಯ ಹಾಗೂ ಹೆಚ್ಚುವರಿ ಹೀಗೆ ವಿವಿಧ ಕಾರಣಗಳನ್ನು ಇಟ್ಟುಕೊಂಡು ಪಟ್ಟಿ ಸಿದ್ಧ ಮಾಡಲು ಅಧಿಕೃತ ಆದೇಶ ನೀಡಲಾಗಿದೆ.
ತಮ್ಮ ಕೆಲಸಕ್ಕೆ ಹೊಂದಿಕೊಳ್ಳುವಿಕೆ, ಕಾರ್ಯಕ್ಷಮತೆ, ಸಾಮರ್ಥ್ಯ, ಕರ್ತವ್ಯದ ಗುಣಮಟ್ಟದ ಆಧಾರ ಮೇಲೆ ಹಾಗೂ ಅನಾರೋಗ್ಯದ ಕಾರಣ ನೀಡಿ ಕರ್ತವ್ಯಕ್ಕೆ ಸಿಗದ ನೌಕರರನ್ನು ಆರು ತಿಂಗಳು, ಎರಡು ವರ್ಷ ಅಥವಾ ಐದು ವರ್ಷದವರೆಗೆ ವಿಸ್ತರಿಸಬಹುದಾದ ಕಡ್ಡಾಯ ರಜೆಯ ಮೇಲೆ ಕಳಿಸುವ ಅಧಿಕಾರನ್ನು ಇಂಡಿಯನ್ ಏರ್ಲೈನ್ಸ್ ನಿರ್ದೇಶಕರು ಚೇರ್ಮನ್ ರಾಜೀವ್ ಬನ್ಸಾಲ್ ಅವರಿಗೆ ನೀಡಿದ್ದಾರೆ ಎಂದು ಜು.14 ರಂದು ಹೊರಡಿಸಲಾದ ಆದೇಶದಲ್ಲಿ ತಿಳಿಸಲಾಗಿದೆ.
ಈ ಮೇಲೆ ತಿಳಿಸಿದ ಅಂಶಗಳನ್ನು ಇಟ್ಟುಕೊಂಡು ಕೇಂದ್ರ ಕಚೇರಿಯ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾದೇಶಿಕ ಕಚೇರಿಗಳ ಮುಖ್ಯಸ್ಥರು ತಮ್ಮ ವಿಭಾಗದ ಪ್ರತಿ ನೌಕರರ ಮೌಲ್ಯಮಾಪನ ಮಾಡಬೇಕು. ವೇತನ ರಹಿತ ಕಡ್ಡಾಯ ರಜೆಯ ಮೇಲೆ ಕಳಿಸಬಹುದಾದ ನೌಕರರ ಹೆಸರುಗಳನ್ನು ಚೇರ್ಮನ್ ಅವರ ಅನುಮೋದನೆಗಾಗಿ ವೈಯಕ್ತಿಕ ವಿಭಾಗದ ಜನರಲ್ ಮ್ಯಾನೇಜರ್ ಅವರಿಗೆ ಕಳಿಸಬೇಕು ಎಂದು ಆದೇಶ ತಿಳಿಸಿದೆ. ಈ ಸಂಬಂಧದ ಮಾಧ್ಯಮಗಳ ಪ್ರಶ್ನೆಗೆ, “ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ಏರ್ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ.
ಕೊರೊನಾ ಕಾರಣದಿಂದ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಇದರಿಂದ ವಿಮಾನಯಾನ ಕಂಪನಿಗಳು ನಷ್ಟ ಅನುಭವಿಸುತ್ತಿದ್ದು, ನಷ್ಟ ಭರ್ತಿಗೆ ವೆಚ್ಚ ಕಡಿತ, ವೇತನ ರಹಿತ ರಜೆ, ಕೆಲಸದಿಂದ ತೆಗೆಯುವುದು ಮುಂತಾದ ಕ್ರಮಗಳನ್ನು ಕೈಗೊಳ್ಳುತ್ತಿವೆ. ಭಾರತದಲ್ಲಿ ಎರಡು ತಿಂಗಳ ಲಾಕ್ಡೌನ್ ಬಳಿಕ ಮೇ 25 ರಂದು ದೇಶದೊಳಗಿನ ವಿಮಾನಯಾನ ಮರು ಚಾಲನೆಗೆ ಶೇ.45 ರಷ್ಟು ಮಾತ್ರ ಅವಕಾಶ ನೀಡಲಾಗಿದೆ. ಮಾರ್ಚ್ 23 ರಿಂದ ನಿಗದಿಯಾಗಿದ್ದ ಅಂತಾರಾಷ್ಟ್ರೀಯ ವಿಮಾನಗಳು ಸಂಪೂರ್ಣ ಬಂದಾಗಿವೆ.