ಆಸ್ಟ್ರೇಲಿಯಾದ ಅಡಿಲೇಡ್ ವಿಮಾನ ನಿಲ್ದಾಣದಲ್ಲಿ ಬಹಳ ದಿನಗಳಿಂದ ಪಾರ್ಕ್ ಮಾಡಲಾಗಿರುವ ‘COVID 19’ ನಂಬರ್ ಪ್ಲೇಟ್ ಇರುವ BMW ಕಾರೊಂದು ನಿಲ್ದಾಣದ ಸಿಬ್ಬಂದಿಗೆ ಬಹಳ ಇರುಸು ಮುರುಸುಂಟು ಮಾಡಿದೆ. ಈ ಕಾರಿನ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋವಿಡ್-19 ಲಾಕ್ಡೌನ್ ಆರಂಭಗೊಂಡಾಗಿನಿಂದಲೂ ಸಹ ಪಾರ್ಕಿಂಗ್ ಜಾಗದಲ್ಲಿ ಈ ಕಾರು ನಿಂತಿದೆ. ಫೆಬ್ರವರಿ 11ರಂದು ಈ ಸೋಂಕಿಗೆ ಕೋವಿಡ್-19 ಎಂದು ಅಧಿಕೃತವಾಗಿ ಹೆಸರಿಡಲಾಗಿದೆ.
ಸುದೀರ್ಘ ಹಾದಿಯ ಪೈಲಟ್ ಒಬ್ಬರು ತಮ್ಮ ಈ ಕಾರನ್ನು ಅಲ್ಲೇ ಪಾರ್ಕ್ ಮಾಡಿ, ವಿಮಾನದಲ್ಲಿ ತೆರಳಿ, ದೂರದ ದೇಶವೊಂದರ ಊರಲ್ಲಿ ಲಾಕ್ಡೌನ್ ಆಗಿರುವ ಕಾರಣ ಈ ಕಾರು ಅಲ್ಲೇ ಇದೆ ಎಂದು ನಿಲ್ದಾಣದ ಸಿಬ್ಬಂದಿ ಅಂದಾಜಿಸಿದ್ದಾರೆ.
ಈ ಥರ ನಂಬರ್ ಪ್ಲೇಟ್ ಇರುವ ಕಾರಣ ಇಂಥ ದುಬಾರಿ ಕಾರನ್ನು ಅಷ್ಟು ದಿನಗಳಾದರೂ ಸಹ ಕದಿಯುವ ಆಲೋಚನೆಯನ್ನೇ ಯಾರೂ ಮಾಡಿಲ್ಲ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.