ದೇಶದಲ್ಲಿ ಕೊರೊನಾ ಸ್ಥಿತಿ ಹೇಗಿದೆ ಎನ್ನುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ, ಗೃಹ ಸಚಿವಾಲಯ ಮತ್ತು ಐಸಿಎಂಆರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದೆ. ಭಾರತದಲ್ಲಿ ಕೊರೊನಾ ವೈರಸ್ ನಿಯಂತ್ರಣದ ಸ್ಥಿತಿ ಹೆಚ್ಚು ಉತ್ತಮವಾಗಿದೆ ಎಂದು ಆರೋಗ್ಯ ಸಚಿವಾಲಯದ ಪರವಾಗಿ ರಾಜೇಶ್ ಭೂಷಣ್ ಹೇಳಿದ್ದಾರೆ.
ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಭಾರತದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 657 ಆಗಿದೆ ಎಂದಿದ್ದಾರೆ. ಕೊರೊನಾದಿಂದ ಸಾವನ್ನಪ್ಪುವವರ ಸಂಖ್ಯೆ 17.2 ಆಗಿದ್ದರೆ, ಇತರ ಹಲವು ದೇಶಗಳಲ್ಲಿ ಇದು ಭಾರತಕ್ಕಿಂತ ಶೇಕಡಾ 35 ಪಟ್ಟು ಹೆಚ್ಚಾಗಿದೆ ಎಂದಿದ್ದಾರೆ.
ದೇಶದ ಒಟ್ಟು ಕೊರೊನಾ ಪ್ರಕರಣಗಳಲ್ಲಿ ಶೇಕಡಾ 86ರಷ್ಟು ಭಾಗ 10 ರಾಜ್ಯಗಳು ಹಂಚಿಕೊಂಡಿವೆ. ಮಹಾರಾಷ್ಟ್ರ ಮತ್ತು ತಮಿಳುನಾಡು ಶೇಕಡಾ 50 ಕ್ಕಿಂತ ಹೆಚ್ಚು ಪ್ರಕರಣಗಳನ್ನು ಹೊಂದಿವೆ. ಇತರ ಎಂಟು ರಾಜ್ಯಗಳಲ್ಲಿ ಶೇಕಡಾ 36 ರಷ್ಟು ಪ್ರಕರಣಗಳಿವೆ ಎಂದಿದ್ದಾರೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳಿಗಿಂತ ಶೇಕಡಾ 1.8 ಪಟ್ಟು ಹೆಚ್ಚು ಜನರು ಗುಣಮುಖರಾಗ್ತಿದ್ದಾರೆ. ಮೇ ತಿಂಗಳಲ್ಲಿ ಭಾರತದಲ್ಲಿ ಚೇತರಿಕೆ ಪ್ರಮಾಣವು ಶೇಕಡಾ 26 ರಷ್ಟಿತ್ತು. ಮೇ ಅಂತ್ಯದ ವೇಳೆಗೆ ಇದು ಸುಮಾರು 48 ಪ್ರತಿಶತಕ್ಕೆ ಏರಿತು ಮತ್ತು ಜುಲೈ ಅಂತ್ಯದ ವೇಳೆಗೆ ಅದು ಶೇಕಡಾ 63 ಕ್ಕೆ ಏರಿದೆ ಎಂದಿದ್ದಾರೆ.