ಸೋಂಕು ಹೆಚ್ಚಾದಂತೆ ಎಲ್ಲಾ ರೋಗಿಗಳಿಗೂ ಬೆಡ್ ವ್ಯವಸ್ಥೆ ಆಸ್ಪತ್ರೆಗಳಲ್ಲಿ ಆಗುತ್ತಿಲ್ಲ. ಈಗಾಗಲೇ ಅನೇಕ ಮಂದಿ ಬೆಡ್ ಇಲ್ಲದೆ ಪರದಾಡುವಂತಾಗಿತ್ತು. ಹೀಗಾಗಿ ಸರ್ಕಾರ ನುರಿತ ವೈದ್ಯರ ಸಲಹೆ ಮೇರೆಗೆ ರೋಗ ಲಕ್ಷಣ ಇಲ್ಲದವರು ಹಾಗೂ ಅಲ್ಪಪ್ರಮಾಣದ ಲಕ್ಷಣ ಉಳ್ಳವರನ್ನು ಮನೆಯಲ್ಲೇ ಪ್ರತ್ಯೇಕವಾಗಿರಿಸಲು ತೀರ್ಮಾನ ತೆಗೆದುಕೊಂಡಿದೆ. ಈ ಬೆನ್ನಲ್ಲೇ ಸುತ್ತೋಲೆಯೊಂದನ್ನು ಆರೋಗ್ಯ ಇಲಾಖೆ ಹೊರಡಿಸಿದೆ.
ಹೌದು, ಹೋಮ್ ಐಸೋಲೇಷನ್ ನಲ್ಲಿರುವವರ ಬಗ್ಗೆ ನಿಗಾ ಇಡಬೇಕು ಹಾಗೂ ವಸ್ತುಸ್ಥಿತಿ ಅವಲೋಕಿಸಿ ವರದಿ ತಯಾರಿಸಿ ನೀಡಬೇಕು ಎಂಬ ಸುತ್ತೋಲೆಯೊಂದನ್ನು ಜಿಲ್ಲಾ ಆರೋಗ್ಯ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಸ್ತುಸ್ಥಿತಿ ಅವಲೋಕನಕ್ಕಾಗಿ ಆರೋಗ್ಯ ತಂಡಗಳನ್ನು ನೇಮಿಸುವಂತೆಯೂ ಅಧಿಕಾರಿಗಳಿಗೆ ತಿಳಿಸಿದೆ.
ಇನ್ನು ಹೋಮ್ ಐಸೋಲೇಷನ್ ನಲ್ಲಿರುವವರಿಗೆ ಶೌಚಗೃಹ ಸಹಿತ ಪ್ರತ್ಯೇಕ ಕೊಠಡಿ ಇರಬೇಕು, ಆ ಕೊಠಡಿಯೊಳಗೆ ಉತ್ತಮ ಗಾಳಿಯಾಡಬೇಕು, ಮನೆಯವರಿಂದ ದೂರ ಇರಬೇಕು, ಮನೆಯ ಪ್ರವೇಶ ದ್ವಾರದಲ್ಲೇ ಹೋಂ ಐಸೋಲೇಶನ್ ಸೂಚನಾ ಪತ್ರ ಅಂಟಿಸಬೇಕು, ವ್ಯಕ್ತಿಯ ಕೈಗೆ 17 ದಿನಗಳ ಹೋಂ ಐಸೋಲೇಶನ್ ಮುದ್ರೆ ಹಾಕಬೇಕು, ಪ್ರತಿದಿನ ನಿಗಾ ವಹಿಸುವುದಕ್ಕಾಗಿ ಟೆಲಿ ಮಾನಿಟರಿಂಗ್ ಕೇಂದ್ರದ ಜತೆ ಸೋಂಕಿತ ವ್ಯಕ್ತಿಗೆ ಸಂಪರ್ಕ ಕಲ್ಪಿಸಬೇಕು, ಆಪ್ ಮತ್ತು ಕೇಂದ್ರ ಸರ್ಕಾರದ ಕೋವಿಡ್-19 ಜಾಲತಾಣದಲ್ಲಿ ಕಾಲಕಾಲಕ್ಕೆ ಮಾಹಿತಿ ರವಾನಿಸಬೇಕು ಎಂದು ಸೂಚನೆ ನೀಡಿದೆ.