ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿ ಇದರ ನಿಯಂತ್ರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇವರ ಜೊತೆಗೆ ಪೊಲೀಸರೂ ಸೇರಿದಂತೆ ಹಲವು ಇಲಾಖೆಗಳ ಸಿಬ್ಬಂದಿ ಕೈಜೋಡಿಸಿದ್ದಾರೆ.
ಈ ಕಾರ್ಯದಲ್ಲಿ ತೊಡಗಿಕೊಂಡಿರುವ ಹಲವು ಮಂದಿ ಪೊಲೀಸರು ಸೋಂಕು ಪೀಡಿತರಾಗಿದ್ದು, ಕೆಲವರು ಸಾವನ್ನೂ ಸಹ ಅಪ್ಪಿದ್ದರು. ಇದೀಗ ರಾಜ್ಯ ಸರ್ಕಾರ ಪೊಲೀಸ್ ಸಿಬ್ಬಂದಿಗೆ ಶುಭ ಸುದ್ದಿಯೊಂದನ್ನು ನೀಡಿದ್ದು, 50 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮನೆಯಿಂದಲೇ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ.
ಅಲ್ಲದೆ ಪೊಲೀಸ್ ಸಿಬ್ಬಂದಿಗೆ ಪ್ರತ್ಯೇಕ ಚಿಕಿತ್ಸೆ ನೀಡುವ ಸಲುವಾಗಿ ‘ಆರೋಗ್ಯ ಭಾಗ್ಯ’ ಯೋಜನೆಯಡಿ ಲಭ್ಯವಾಗುವ ಹಣವನ್ನು ನಿಯೋಜಿತ ಕೋವಿಡ್ ಆಸ್ಪತ್ರೆಗಳಿಗೆ ಬಿಡುಗಡೆ ಮಾಡಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಜೊತೆಗೆ ಕಾರ್ಯನಿರ್ವಹಣೆಯ ಕುರಿತಂತೆ ಹಲವು ಸೂಚನೆಗಳನ್ನು ನೀಡಲಾಗಿದ್ದು, ಠಾಣೆಗಳಲ್ಲಿ ಸೋಂಕು ಹರಡುತ್ತಿರುವುದರಿಂದ ಅವಶ್ಯಕತೆ ಇರುವ ಸಿಬ್ಬಂದಿ ಮಾತ್ರವೇ ಠಾಣೆಯಲ್ಲಿ ಕಾರ್ಯ ನಿರ್ವಹಿಸಬೇಕು. ಕೆಲಸ ಮುಗಿದ ಬಳಿಕ ಠಾಣೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು ಎಂದು ತಿಳಿಸಲಾಗಿದೆ.
ಆಸ್ಪತ್ರೆ ಹಾಗೂ ಸ್ಮಶಾನಗಳಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಕಡ್ಡಾಯವಾಗಿ ಪಿಪಿಇ ಕಿಟ್ ಹಾಗೂ ಮಾಸ್ಕ್ ವಿತರಿಸಲು ಆದೇಶಿಸಲಾಗಿದ್ದು, ಸಿಬ್ಬಂದಿಯ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಆಯುರ್ವೇದ ಔಷಧಿ ನೀಡಲು ಸೂಚಿಸಲಾಗಿದೆ.