ಜೂನ್ 22ರ ಸೋಮವಾರದಿಂದ ಆರಂಭವಾದ ಆಷಾಡ ಮಾಸ ಜುಲೈ 19 ರಂದು ಪೂರ್ಣಗೊಳ್ಳಲಿದೆ. ಜುಲೈ 20 ಅಮಾವಾಸ್ಯೆಯಾಗಿದ್ದು, ಮರುದಿನ ಅಂದರೆ ಜುಲೈ 21ರ ಮಂಗಳವಾರದಿಂದ ಶ್ರಾವಣ ಮಾಸ ಆರಂಭವಾಗಲಿದೆ. ಶ್ರಾವಣ ಮಾಸದ ಆರಂಭದೊಂದಿಗೆ ಸಾಲು ಸಾಲು ಹಬ್ಬಗಳು ಬರಲಿದ್ದು, ಆದರೆ ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ, ಹಬ್ಬಗಳ ಆಚರಣೆ ಮೇಲೆ ಪರಿಣಾಮ ಬೀರುವುದು ನಿಶ್ಚಿತವಾಗಿದೆ.
ಕೊರೊನಾಗೆ ಸೂಕ್ತ ಲಸಿಕೆ ಇನ್ನೂ ಸಿದ್ಧವಾಗಿಲ್ಲವಾದ ಕಾರಣ ಬಹುತೇಕ ಈ ವರ್ಷಾಂತ್ಯದವರೆಗೆ ಈ ಮಹಾಮಾರಿ ಕಾಡಲಿದೆ. ಹೀಗಾಗಿ ಗಣೇಶೋತ್ಸವ ಸೇರಿದಂತೆ ಉಳಿದ ಹಬ್ಬಗಳ ಆಚರಣೆ ಹೇಗೆ ಎಂಬ ಪ್ರಶ್ನೆ ಈಗ ಮೂಡಿದೆ. ವರಮಹಾಲಕ್ಷ್ಮಿ ಹಬ್ಬ, ಗಣೇಶ ಚತುರ್ಥಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ಬಕ್ರೀದ್, ನಾಗರ ಪಂಚಮಿ, ರಾಷ್ಟ್ರೀಯ ಹಬ್ಬವಾದ ಆಗಸ್ಟ್ 15 ರ ಸ್ವಾತಂತ್ರೋತ್ಸವ, ನಾಡಹಬ್ಬ ದಸರಾ, ದೀಪಾವಳಿ, ಕ್ರಿಸ್ಮಸ್ ಹೀಗೆ ಸಾಲು-ಸಾಲು ಹಬ್ಬಗಳ ಆಚರಣೆಗೆ ಕೊರೊನಾ ಸಮಸ್ಯೆಯಾಗಿ ಪರಿಣಮಿಸಲಿದೆ.
ಸಾರ್ವಜನಿಕ ಉತ್ಸವವಾಗಿ ದೇಶದೆಲ್ಲೆಡೆ ಆಚರಣೆ ಮಾಡುವ ಗಣೇಶ ಹಬ್ಬವನ್ನು ಈ ಬಾರಿ ಮನೆಯಲ್ಲಿ ಮಾಡಬಹುದೇ ಹೊರತು ಸಾರ್ವಜನಿಕವಾಗಿ ಆಚರಿಸಲು ಅನುಮತಿ ಸಿಗುವುದು ಅನುಮಾನವಾಗಿದೆ. ಇನ್ನು ನಾಡಹಬ್ಬ ದಸರಾ ಕೂಡಾ ಸಾಂಕೇತಿಕವಾಗಿ ಆಚರಣೆ ಮಾಡುವ ಸಾಧ್ಯತೆ ಇದೆ. ಹಬ್ಬಗಳ ಆಚರಣೆ ಕುರಿತಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸುವ ನಿರೀಕ್ಷೆಯಿದ್ದು, ಇದಾದ ಬಳಿಕವೇ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ.