ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಮಿತಾಬ್ ಬಚ್ಚನ್, ಅವರ ಪುತ್ರ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಹಾಗೂ ಮೊಮ್ಮಗಳು ಆರಾಧ್ಯ ಬಚ್ಚನ್ ಗೆ ಕೊರೊನಾ ಸೋಂಕು ತಗುಲಿದ್ದು, ಈಗ ಎಲ್ಲರೂ ಮುಂಬೈನ ಪ್ರತಿಷ್ಠಿತ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಹೊರತುಪಡಿಸಿ ಕುಟುಂಬದ ಇತರೆ ಸದಸ್ಯರಿಗೆ ಸೋಂಕು ತಗುಲಿರುವ ಕಾರಣ ಬೃಹನ್ಮುಂಬೈ ನಗರಪಾಲಿಕೆ, ಬಚ್ಚನ್ ಕುಟುಂಬ ವಾಸವಿರುವ ಜಲ್ಸಾ ನಿವಾಸವನ್ನು ಸ್ಯಾನಿಟೈಸ್ ಮಾಡಿದೆಯಲ್ಲದೇ ಹೊರಗಿನವರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇದರ ಮಧ್ಯೆ ಬಿಗ್ ಬಿ, ಮತ್ತವರ ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಲಾಕ್ ಡೌನ್ ಜಾರಿಯಾದ ಬಳಿಕ ಅಮಿತಾಬ್ ಬಚ್ಚನ್ ತಮ್ಮ ನಿವಾಸದಿಂದ ಹೊರಬಂದಿರಲಿಲ್ಲವೆನ್ನಲಾಗಿದ್ದು, ಅಭಿಷೇಕ್ ಬಚ್ಚನ್ ಹೊರತುಪಡಿಸಿ ಉಳಿದೆಲ್ಲರೂ ಮನೆಯಲ್ಲೇ ಇದ್ದರು. ಆದರೆ ಅಭಿಷೇಕ್ ಬಚ್ಚನ್ ಕಾರ್ಯನಿಮಿತ್ತ ಡಬ್ಬಿಂಗ್ ಸ್ಟುಡಿಯೋಗೆ ತೆರಳಿದ್ದು, ಅಲ್ಲಿ ಅವರಿಗೆ ಸೋಂಕು ತಗುಲಿರಬಹುದು ಎನ್ನಲಾಗಿದೆ. ಇದು ಈಗ ಇತರೆ ಕುಟುಂಬ ಸದಸ್ಯರಿಗೂ ವ್ಯಾಪಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.