ಕೊರೋನಾ ಸೋಂಕು ತಡೆ ಉದ್ದೇಶದಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜುಲೈ 14 ರಿಂದ ಒಂದು ವಾರ ಕಾಲ ಲಾಕ್ ಡೌನ್ ಜಾರಿ ಮಾಡಲಾಗಿದೆ.
ಎರಡು ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿ ಮಾಡಿದ್ದು ಅಗತ್ಯ ಸೇವೆ, ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.
ಭಾನುವಾರದ ಲಾಕ್ ಡೌನ್ ಸೋಮವಾರ ಬೆಳಗ್ಗೆ 5 ಗಂಟೆಗೆ ಮುಕ್ತಾಯವಾಗಲಿದೆ. ಮಂಗಳವಾರ ರಾತ್ರಿಯವರೆಗೆ ಇತರೆ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.
ಮಂಗಳವಾರ ರಾತ್ರಿ 8 ಗಂಟೆಯಿಂದ ಲಾಕ್ ಡೌನ್ ಜಾರಿಯಾಗಲಿದ್ದು, ಟ್ಯಾಕ್ಸಿ, ಆಟೋ, ಕ್ಯಾಬ್, ಬಿಎಂಟಿಸಿ, ಕೆಎಎಸ್ಆರ್ಟಿಸಿ ಸಂಚಾರ ಇರುವುದಿಲ್ಲ. ಬಾರ್, ವೈನ್ ಸ್ಟೋರ್ ಬಂದ್ ಆಗಲಿವೆ. ಅಗತ್ಯ ವಸ್ತು ಸೇವೆಗಳಿಗೆ ಅವಕಾಶವಿದ್ದು, ಅನಗತ್ಯವಾಗಿ ಯಾರೂ ಹೊರ ಬರದಂತೆ ಸೂಚಿಸಲಾಗಿದೆ.
ಜುಲೈ 14 ರ ಮಂಗಳವಾರ ರಾತ್ರಿ 8 ಗಂಟೆಯಿಂದ 1 ವಾರಗಳ ಕಾಲ ಜುಲೈ 23 ರ ಬೆಳಿಗ್ಗೆ 5 ಗಂಟೆಯವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲಾಗುವುದು.
ಈ ಅವಧಿಯಲ್ಲಿ ಎಂದಿನಂತೆ ಆಸ್ಪತ್ರೆಗಳು, ದಿನಸಿ, ಹಾಲು, ಹಣ್ಣು, ತರಕಾರಿ, ಔಷಧಿ ಮೊದಲಾದ ದಿನಬಳಕೆಯ ಅಗತ್ಯ ವಸ್ತುಗಳು ಲಭ್ಯವಿರುತ್ತವೆ. ಇದರ ಜೊತೆ ಈಗಾಗಲೇ ನಿಗದಿಯಾಗಿರುವ ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯಲಿವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.