ಇಲ್ಲೊಬ್ಬರು ಪೋಸ್ಟ್ ಮ್ಯಾನ್ ಕಳೆದ ಮೂವತ್ತು ವರ್ಷಗಳಿಂದಲೂ ಪೋಸ್ಟ್ ವಿತರಿಸಲು ಪ್ರತಿದಿನ ಹದಿನೈದು ಕಿಲೋಮೀಟರ್ ನಡೆದು ದಟ್ಟ ಕಾಡಿನ ಹಾದಿಯಲ್ಲಿ ಕ್ರಮಿಸಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಮಿಳುನಾಡಿನ ಡಿ. ಶಿವನ್ ಎಂಬ ಈ ಪೋಸ್ಟ್ ಮ್ಯಾನ್ ಕೂನೂರಿನ ಹಿಲ್ ಗ್ರೋವ್ ಅಂಚೆ ಕಚೇರಿಯಿಂದ ಸಿಂಗಾರ ಮತ್ತು ಮರಪಲಂ ಬಳಿಯ ಕಾಡುಗಳಲ್ಲಿನ ಜನವಸತಿ ಪ್ರದೇಶಗಳಿಗೆ ತೆರಳಿ ಅಂಚೆ ಪತ್ರ ಬಟವಾಡೆ ಮಾಡುತ್ತಿದ್ದರು. ಪ್ರತಿ ದಿನ ಹದಿನೈದು ಕಿಲೋಮೀಟರ್ ನಡೆದುಕೊಂಡೇ ಕಾಡಿನಲ್ಲಿ ಸಾಗುವಾಗ ಅನೇಕ ಬಾರಿ ಆನೆ, ಕರಡಿ ಸೇರಿ ವಿವಿಧ ಪ್ರಾಣಿಗಳನ್ನು ಮುಖಾಮುಖಿಯಾಗಿದ್ದಾರಂತೆ.
ಮೂವತ್ತು ವರ್ಷ ಕಾರ್ಯತತ್ಪರತೆಯಿಂದ ಕೆಲಸ ಮಾಡಿ ಇತ್ತೀಚೆಗಷ್ಟೇ ಶಿವನ್ ನಿವೃತ್ತರಾದರು. ಶಿವನ್ ಕುರಿತ ಮಾಹಿತಿ ತಿಳಿದ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರ ಸಾಧನೆಯನ್ನು ಟ್ವೀಟರ್ ನಲ್ಲಿ ಪ್ರಶಂಸಿಸಿದ್ದಾರೆ.