ಕೊರೊನಾದಿಂದ ದೂರ ಉಳಿಯಲು ಮಾಸ್ಕ್ ಧಾರಣೆ ಅನಿವಾರ್ಯವಾಗಿದ್ದು, ಮಾರುಕಟ್ಟೆಗೆ ವಿಭಿನ್ನ ಮಾಸ್ಕ್ ಗಳು ಲಗ್ಗೆ ಇಡುತ್ತಲೇ ಇವೆ.
ಮನುಷ್ಯರ ಚರ್ಮದ ಬಣ್ಣ, ವ್ಯಕ್ತಿಯ ಮುಖವನ್ನೇ ಹೋಲುವ ಮಾಸ್ಕ್, ಮಕ್ಕಳನ್ನು ಸೆಳೆಯಲು ಕಾರ್ಟೂನ್ ಪಿಕ್ಚರ್ ಇರುವ ಮಾಸ್ಕ್ ಹೀಗೆ ನಾನಾ ನಮೂನೆಯ ಮಾಸ್ಕ್ ಗಳು ಬಂದಿವೆ.
ಇದೀಗ ಪರೋಟ ಮಾದರಿಯ ಮಾಸ್ಕ್ ಮಾರುಕಟ್ಟೆಗೆ ಬಂದಿದ್ದು, ಇದನ್ನು ತಿನ್ನಬಹುದೇ ಹೊರತು ಮುಖಕ್ಕೆ ಧರಿಸಲಾಗುವುದಿಲ್ಲ.
ಅರೆ, ಇದ್ಯಾವ ರೀತಿಯದ್ದು ಎಂದು ಹುಬ್ಬೇರಿಸಬೇಡಿ. ತಮಿಳುನಾಡಿನ ಮಧುರೈನಲ್ಲಿರುವ ಟೆಂಪಲ್ ಸಿಟಿ ರೆಸ್ಟೋರೆಂಟ್ ನಲ್ಲಿ ಈ ಮಾಸ್ಕ್ ಪರೋಟ ತಯಾರಾಗುತ್ತಿದ್ದು, ಜನ ಜಾಗೃತಿ ಮೂಡಿಸುವುದರ ಜೊತೆಗೆ ಹಸಿದ ಹೊಟ್ಟೆಯನ್ನೂ ತುಂಬಿಸುತ್ತಿದೆ.
ಈಗಾಗಲೇ ಹಲವೆಡೆ ಕೊರೊನಾ ವೈರಾಣು ಹೋಲುವ ಪಿಜ್ಜಾ ಸೇರಿದಂತೆ ಹಲವು ವಿಧದ ತಿಂಡಿಗಳನ್ನು ತಯಾರಿಸಿ ಗಮನ ಸೆಳೆದ ಪ್ರಸಂಗಗಳಿವೆ. ಅದರ ಜೊತೆಗೆ ಪರೋಟಗೆ ಹೆಸರಾದ ಟೆಂಪಲ್ ಸಿಟಿ ರೆಸ್ಟೋರೆಂಟ್ ನ ಎಲ್. ಕುಮಾರ್ ಸಿದ್ಧಪಡಿಸಿದ ಮಾಸ್ಕ್ ಮಾದರಿಯ ಪರೋಟ ಆಕರ್ಷಿಸುತ್ತಿದೆ. ರೆಸ್ಟೋರೆಂಟ್ ಗೆ ಬರುವ ಗ್ರಾಹಕರಿಗೆ ಮಾಸ್ಕ್ ಧಾರಣೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪರೋಟವನ್ನು ಮಾಸ್ಕ್ ವಿನ್ಯಾಸದಲ್ಲಿ ಬೇಯಿಸಿ ಕೊಡಲಾಗುತ್ತಿದೆ. ಇದೀಗ ಜಾಲತಾಣದಲ್ಲೂ ಸುದ್ದಿ ಮಾಡಿದೆ.