ಊಟಕ್ಕೆ ಅನ್ನ ಸಾಂಬಾರಿನ ಜತೆಗೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ ಅಲ್ವಾ..? ಇಲ್ಲಿ ಸುಲಭವಾಗಿ ಮಾಡಬಹುದಾದ ಸ್ಟಪಡ್ ಬೆಲ್ ಪೆಪ್ಪರ್(ಕ್ಯಾಪ್ಸಿಕಂ) ಮಾಡುವ ವಿಧಾನ ಇದೆ. ಇದು ಅನ್ನ, ಚಪಾತಿ ಜತೆ ಸಖತ್ ಆಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು:
2 – ಹಸಿರುಬಣ್ಣದ ಕ್ಯಾಪ್ಸಿಕಂ, 1 – ಈರುಳ್ಳಿ, 2 – ಆಲೂಗಡ್ಡೆ, ½ ಕಪ್ – ಕೊತ್ತಂಬರಿ ಸೊಪ್ಪು, 1 – ಹಸಿಮೆಣಸು, ½ ಟೀ ಸ್ಪೂನ್ – ಅರಿಶಿಣ ಪುಡಿ, 1 ಟೀ ಸ್ಪೂನ್ – ಖಾರದಪುಡಿ, ½ ಟೀ ಸ್ಪೂನ್ – ಜೀರಿಗೆ ಪುಡಿ, 2 ಟೀ ಸ್ಪೂನ್ – ಧನಿಯಾ ಪುಡಿ, 1 ಟೀ ಸ್ಪೂನ್ – ಜೀರಿಗೆ, ಚಿಟಿಕೆ – ಇಂಗು, 1 ಟೇಬಲ್ ಸ್ಪೂನ್ – ಎಣ್ಣೆ, ಉಪ್ಪು – ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಮೊದಲಿಗೆ ಕ್ಯಾಪ್ಸಿಕಂ ಅನ್ನು ವೃತ್ತಕಾರದಲ್ಲಿ ಎರಡು ಭಾಗವಾಗಿ ಮಾಡಿಕೊಂಡು ಒಳಗಿರುವ ಬೀಜವನ್ನೆಲ್ಲಾ ತೆಗೆಯಿರಿ. ನಂತರ ಇದನ್ನು 15 ನಿಮಿಷಗಳ ಕಾಲ ನೀರಿನಲ್ಲಿ ಬೇಯಿಸಿಕೊಂಡು ನೀರನ್ನೆಲ್ಲಾ ಸೋಸಿ ತೆಗೆದು ಇದನ್ನು ಒಂದು ಪ್ಲೇಟ್ ಗೆ ತೆಗೆದಿಟ್ಟುಕೊಳ್ಳಿ.
ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಚೆನ್ನಾಗಿ ಹಿಸುಕಿಕೊಳ್ಳಿ. ನಂತರ ಹಸಿಮೆಣಸು, ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ ಜೀರಿಗೆ ಕಾಳು, ಇಂಗು ಹಾಕಿ ಜೀರಿಗೆ ಸಿಡಿದಾಗ ಈರುಳ್ಳಿ, ಹಸಿಮೆಣಸು ಸೇರಿಸಿ ಕೆಂಪಾಗುವವರೆಗೆ ಫ್ರೈ ಮಾಡಿ.
ನಂತರ ಇದಕ್ಕೆ ಬೇಯಿಸಿಟ್ಟುಕೊಂಡ ಆಲೂಗಡ್ಡೆ ಸೇರಿಸಿ ಅರಿಶಿನ ಪುಡಿ, ಧನಿಯಾ ಪುಡಿ, ಖಾರದಪುಡಿ, ಜೀರಿಗೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಫ್ರೈ ಮಾಡಿ. ಒವೆನ್ ಅನ್ನು 200 ಪ್ರಿ ಹೀಟ್ ಮಾಡಿಕೊಂಡು ಬೇಯಿಸಿಟ್ಟುಕೊಂಡ ಕ್ಯಾಪ್ಸಿಕಂ ನ ಒಳಗಡೆ, ಮಾಡಿಟ್ಟುಕೊಂಡ ಆಲೂಗಡ್ಡೆ ಮಿಶ್ರಣ ತುಂಬಿ ಒವೆನ್ ನಲ್ಲಿ 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.