ಭೋಪಾಲ್: ಮದುವೆಗೆ ಕೆಲವೇ ಗಂಟೆ ಬಾಕಿ ಇರುವಾಗಲೇ ಬ್ಯೂಟಿ ಪಾರ್ಲರ್ ನಲ್ಲಿ ವಧುವನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ರತ್ಲಾಂ ಜಿಲ್ಲೆಯಲ್ಲಿ ನಡೆದಿದೆ.
ಶಾಜಾಪುರ ಜಿಲ್ಲೆಯ 33ವರ್ಷದ ಸೋನು ಯಾದವ್ ಕೊಲೆಯಾದ ಮಹಿಳೆ ಎಂದು ಹೇಳಲಾಗಿದೆ. ಉಜ್ಜಯಿನಿಯ ನಾಗ್ಡಾ ನಿವಾಸಿ ಗೌರವ್ ಅವರೊಂದಿಗೆ ಸೋನು ಯಾದವ್ ಮದುವೆ ನಿಗದಿಯಾಗಿತ್ತು. ಭೋಪಾಲ್ ನಿಂದ ವಾಯುವ್ಯಕ್ಕೆ 300 ಕಿಲೋಮೀಟರ್ ದೂರದಲ್ಲಿರುವ ಜಾವೊರ ರೆಸಾರ್ಟ್ ನಲ್ಲಿ ಮದುವೆ ನಿಗದಿಯಾಗಿದ್ದು, ಅಲ್ಲೇ ಸಮೀಪದಲ್ಲಿದ್ದ ಬ್ಯೂಟಿ ಪಾರ್ಲರ್ ಗೆ ಸೋನು ಯಾದವ್ ತೆರಳಿದ್ದರು.
ಮದುವೆಗೆ ಕೆಲವೇ ಗಂಟೆಗಳ ಮೊದಲು ಅವರು ಬ್ಯೂಟಿ ಪಾರ್ಲರ್ ನಲ್ಲಿ ರೆಡಿಯಾಗುತ್ತಿದ್ದ ವೇಳೆ ಪ್ರಿಯಕರ ಫೋನ್ ಮಾಡಿದ್ದಾನೆ. ಆದರೆ, ಆಕೆ ಫೋನ್ ರಿಸೀವ್ ಮಾಡದಿದ್ದಾ ಸ್ನೇಹಿತನ ಫೋನ್ ನಿಂದ ಕರೆ ಮಾಡಿದ್ದು, ಅಪರಿಚಿತ ನಂಬರ್ ನಿಂದ ಬಂದ ಕರೆಯನ್ನು ಸೋನು ಯಾದವ್ ಸ್ವೀಕರಿಸಿದ್ದಾಳೆ. ಆಕೆಯ ಮನವೊಲಿಸಿ ಇರುವ ಸ್ಥಳವನ್ನು ತಿಳಿದುಕೊಂಡ ಪ್ರಿಯಕರ ಫೋನ್ ಕರೆ ಕಟ್ ಮಾಡಿದ 10 ನಿಮಿಷದೊಳಗೆ ಬ್ಯೂಟಿ ಪಾರ್ಲರ್ಗೆ ಧಾವಿಸಿದ್ದಾನೆ.
ಸೋನು ಯಾದವ್ ಕತ್ತು ಸೀಳಿ ಕೊಲೆ ಮಾಡಿ ಸ್ಥಳದಿಂದ ಸ್ನೇಹಿತನೊಂದಿಗೆ ಪರಾರಿಯಾಗಿದ್ದಾನೆ. ಕೂಡಲೇ ಸೋನು ಯಾದವ್ ಳನ್ನು ಸ್ನೇಹಿತೆಯರು, ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆಗಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.
ಪ್ರಿಯಕರ ರಾಜಸ್ಥಾನಕ್ಕೆ ಪರಾರಿಯಾಗಿದ್ದು ಆತನಿಗೆ ನೆರವು ನೀಡಿದ ಸ್ನೇಹಿತನನ್ನು ಬಂಧಿಸಲಾಗಿದೆ. ವಿಚ್ಛೇದಿತೆಯಾಗಿರುವ ಸೋನು ಯಾದವ್ ಗೆ ಇದು ಎರಡನೇ ಮದುವೆಯಾಗಿದೆ. ಮುಖ್ಯ ಆರೋಪಿಯ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆತನ ವಿಚಾರಣೆ ನಡೆಸಲಾಗಿದ್ದು ತನಿಖೆ ಮುಂದುವರಿಸಲಾಗಿದೆ. ಮುಖ್ಯ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ರತ್ಲಾಂ ಜಿಲ್ಲಾ ಪೊಲೀಸ್ ಅಧೀಕ್ಷಕ ಗೌರವ್ ತಿವಾರಿ ತಿಳಿಸಿದ್ದಾರೆ.