
ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಮದುವೆಯಾದ ಕೆಲವೇ ದಿನಗಳ ಅಂತರದಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಶಾಲ್ ಪ್ರಜಾಪತಿ ಮತ್ತು ನಿಶಾ ಗೌತಮ್ ಆತ್ಮಹತ್ಯೆ ಮಾಡಿಕೊಂಡವರು. ಪ್ರೀತಿಸಿದ್ದ ಇವರು ತಮ್ಮ ಕುಟುಂಬಗಳ ಒಪ್ಪಿಗೆಯೊಂದಿಗೆ ಜೂನ್ 29ರಂದು ಮದುವೆಯಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಶಾಲ್ ಪ್ರಜಾಪತಿ ಗುರುವಾರ ಮೆಹರೋಲಿ ರೈಲ್ವೇ ಕ್ರಾಸಿಂಗ್ ನಲ್ಲಿ ಚಲಿಸುವ ರೈಲಿನ ಮುಂದೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ಮರುದಿನ ನಿಶಾ ಗೌತಮ್ ಅವರ ಪೋಷಕರು ಅಳಿಯನ ಮನೆಯಿಂದ ಕವಿನಗರದ ಕೈಲಾಶ್ ಪುರಿ ಕಾಲೋನಿಯಲ್ಲಿರುವ ಮನೆಗೆ ಮಗಳನ್ನು ಕರೆದುಕೊಂಡು ಹೋಗಿ ಸಮಾಧಾನಪಡಿಸಿದ್ದಾರೆ.
ಆದರೆ, ತಡರಾತ್ರಿ ನಿಶಾ ಮನೆಯ ಕೋಣೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಠಾಣಾಧಿಕಾರಿ ಮೊಹಮ್ಮದ್ ಅಸ್ಲಾಂ ಹೇಳಿದ್ದಾರೆ.