ಲಖ್ನೋ: ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಿಂದಲೇ ಸಂದೇಶ ರವಾನೆಯಾಗಿದೆ ಎನ್ನುವ ಸಂಗತಿ ಗೊತ್ತಾಗಿದೆ.
ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಕಾನ್ಪುರದಲ್ಲಿ ಅಡಗಿಕೊಂಡಿರುವ ಮಾಹಿತಿ ತಿಳಿದ ಪೊಲೀಸರು ಬಂಧನಕ್ಕೆ ತೆರಳಿದ್ದ ವೇಳೆ ಫೈರಿಂಗ್ ಮಾಡಿ 8 ಪೊಲೀಸರನ್ನು ಹತ್ಯೆ ಮಾಡಲಾಗಿತ್ತು. ಪೊಲೀಸರು ದಾಳಿ ಮಾಡಲಿದ್ದಾರೆ ಎನ್ನುವ ಸಂದೇಶ ಪೊಲೀಸ್ ಠಾಣೆಯಿಂದಲೇ ಆತನಿಗೆ ರವಾನೆಯಾಗಿರುವುದು ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಗೊತ್ತಾಗಿದೆ.
ಕಾನ್ಪುರ ಸಮೀಪದ ಬಿಕ್ರು ಗ್ರಾಮದ ಬಳಿ ವಿಕಾಸ್ ದುಬೆ ಅಡ್ಡೆ ಮೇಲೆ ಪೊಲೀಸರ ತಂಡ ದಾಳಿ ನಡೆಸಿದ್ದು ಮೊದಲೇ ಮುನ್ಸೂಚನೆ ಸಿಕ್ಕಿದ್ದರಿಂದ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ ವಿಕಾಸ್ ದುಬೆ ಮತ್ತು ಸಹಚರರು ಪರಾರಿಯಾಗಿದ್ದರು.
ಆತನಿಗೆ ಠಾಣೆಯಿಂದಲೇ ಮಾಹಿತಿ ನೀಡಿದವರು ಯಾರು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಮಾಹಿತಿ ನೀಡಿದ್ದ ಓರ್ವ ಪೊಲೀಸ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನು ವಿಕಾಸ್ ದುಬೆ ಸಹಚರನೊಬ್ಬನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾನ್ಪುರದ ಕಲ್ಯಾಣ್ ಪುರ ಪ್ರದೇಶದಲ್ಲಿ ಆರೋಪಿ ದಯಾಶಂಕರ ಅಗ್ನಿಹೋತ್ರಿ ಎಂಬವನನ್ನು ಬಂಧಿಸಲಾಗಿದೆ. ಈತ ಪೊಲಿಸರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಕಾನ್ಪುರ ಜಿಲ್ಲಾಡಳಿತ ವಿಕಾಸ್ ದುಬೆ ಮನೆ, ಕಾರ್ ಗಳನ್ನು ಧ್ವಂಸಗೊಳಿಸಿದೆ. ಠಾಣಾಧಿಕಾರಿ ವಿಜಯ್ ತಿವಾರಿಯನ್ನು ಅಮಾನತು ಮಾಡಲಾಗಿದೆ.