ಬೆಂಗಳೂರು: ಪ್ರೀತಿಸಿ ಕೈಕೊಟ್ಟ ಪ್ರಿಯಕರ ಬೇರೆ ಯುವತಿಯನ್ನು ಮದುವೆಯಾಗಿದ್ದರಿಂದ ಮನನೊಂದ ಅಂಗನವಾಡಿ ಶಿಕ್ಷಕಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
27 ವರ್ಷದ ಪವಿತ್ರಾ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ದಾಸರಹಳ್ಳಿ ನಿವಾಸಿಯಾಗಿರುವ ಪವಿತ್ರಾ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಿಯಕರ ನಾಗೇಶ್ ಎಂಬವನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ತಾಯಿ ಮತ್ತು ಸಹೋದರನೊಂದಿಗೆ ದಾಸರಹಳ್ಳಿಯಲ್ಲಿ ನೆಲೆಸಿದ್ದ ಪವಿತ್ರಾ ಖಾಸಗಿ ಕಂಪನಿ ಉದ್ಯೋಗಿ ನಾಗೇಶ್ ನನ್ನು ಪ್ರೀತಿಸಿದ್ದರು. ಇವರ ಪ್ರೀತಿಗೆ ನಾಗೇಶ್ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಕೆಲವು ದಿನಗಳ ಹಿಂದೆ ಪೋಷಕರು ತೋರಿಸಿದ ಹುಡುಗಿ ಮದುವೆಯಾಗಿದ್ದ ನಾಗೇಶ್ ಸಾಮಾಜಿಕ ಜಾಲತಾಣದಲ್ಲಿ ಮದುವೆ ಫೋಟೋ ಹಾಕಿದ್ದ. ಇದರಿಂದ ಬೇಸರಗೊಂಡ ಪವಿತ್ರಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ಸಾವಿಗೆ ನಾಗೇಶ್ ಕಾರಣ ಎಂದು ಬರೆದಿದ್ದಾರೆ ಎನ್ನಲಾಗಿದೆ.