ಪ್ರಾಣಿಗಳು ಅವುಗಳ ಮರಿಗಳಿಗೆ ಜೀವನದ ಕಲೆಯನ್ನು ಕಲಿಸುತ್ತವೆ. ಆನೆ, ಹುಲಿಗಳು, ಹಕ್ಕಿಗಳು ತಮ್ಮ ಮಕ್ಕಳಿಗೆ ಕೌಶಲ್ಯ ಕಲಿಸುವ ವಿಡಿಯೋಗಳು ಸಾಕಷ್ಟಿವೆ. ಪ್ರಾಣಿಗಳ ಇಂಥ ವಿಡಿಯೋಗಳನ್ನು ಜನ ಹೆಚ್ಚು ಇಷ್ಟಪಡುತ್ತಾರೆ. ಈಗಂತೂ ಜಾಲತಾಣಗಳಲ್ಲಿ ಸಾಕಷ್ಟು ಪ್ರಸಿದ್ಧವಾಗಿಬಿಡುತ್ತವೆ.
ರಸ್ತೆ ಪಕ್ಕದ ತಡೆಗೋಡೆ ದಾಟಲು ಕಷ್ಟಪಡುತ್ತಿದ್ದ ಮರಿ ಆನೆಯನ್ನು ತಾಯಿ ಹತ್ತಿಸಿ, ಸುರಕ್ಷಿತವಾಗಿ ರಸ್ತೆ ದಾಟಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಘಟ್ಟ ಪ್ರದೇಶದ ಹೆದ್ದಾರಿಯಲ್ಲಿ ತಾಯಿ ಆನೆಯೊಂದು ತನ್ನ ಎರಡು ಮರಿಗಳ ಜತೆ ರಸ್ತೆ ದಾಟುತ್ತಿರುವ ಸನ್ನಿವೇಶವನ್ನು ಅಲ್ಲಿ ಸಾಗುತ್ತಿದ್ದ ವಾಹನವೊಂದರ ಮೇಲಿಂದ ವಿಡಿಯೋ ಮಾಡಲಾಗಿದೆ. ದೊಡ್ಡ ಮರಿ ಸುಲಭವಾಗಿ ಚಿಕ್ಕ ತಡೆಗೋಡೆ ಏರಿ ಬಿಡುತ್ತದೆ. ಇನ್ನೊಂದು ಸಣ್ಣ ಮರಿ ಗೋಡೆ ಏರಲಾರದೇ ತಿಣುಕಾಡುತ್ತದೆ. ಮುಂದೆ ಹತ್ತಿ ಹೋಗಿ ಕೆಲ ಹೊತ್ತು ನೋಡಿದ ತಾಯಿ ಆನೆ ಮರಿಗೆ ಹತ್ತಲಾಗದೇ ಇರುವುದನ್ನು ಕಂಡು ವಾಪಸ್ ರಸ್ತೆಗೆ ಇಳಿದು ಮರಿಯನ್ನು ಹತ್ತಿಸುತ್ತದೆ.
ಇದು ಭಾರತದ ಯಾವ ಪ್ರದೇಶದಲ್ಲಿ ನಡೆದಿದ್ದು ಎಂಬುದು ಸ್ಪಷ್ಟವಾಗಿಲ್ಲ. ಐಎಫ್ಎಸ್ ಅಧಿಕಾರಿ ಸುಧಾ ರಮೆನ್ ಅವರು 1.28 ನಿಮಿಷಗಳ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. 29 ಸಾವಿರ ಜನರು ವೀಕ್ಷಿಸಿದ್ದಾರೆ. 2 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. 500 ಕ್ಕೂ ಅಧಿಕ ಜನರು ಪ್ರತಿಕ್ರಿಯಿಸಿದ್ದಾರೆ.