ಚಾಲನಾ ಪರವಾನಗಿ ನವೀಕರಣಕ್ಕಾಗಿ ದೊಡ್ಡಬಳ್ಳಾಪುರ ಮುನೇಗೌಡ ಎಂಬ ಕಾರು ಚಾಲಕ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಇದೇನಪ್ಪಾ ಚಾಲನಾ ಪರವಾನಗಿ ನವೀಕರಣಕ್ಕೆ ಆರ್ಟಿಓ ಕಚೇರಿಗೆ ಹೋಗಬಹುದಿತ್ತಲ್ವಾ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಆರ್ಟಿಓ ಕಚೇರಿ ಬಿಟ್ಟು ರಾಷ್ಟ್ರಪತಿಗಳಿಗೆ ಪತ್ರ ಬರೆಯೋದಕ್ಕೂ ಕಾರಣ ಇದೆ.
ಫ್ರೆಬ್ರವರಿ 2018 ರಲ್ಲಿ ಚಾಲನಾ ಪರವಾನಗಿ ನವೀಕರಣಕ್ಕೆ ದೇವನಹಳ್ಳಿ ಆರ್ಟಿಓ ಕಚೇರಿಗೆ ಅರ್ಜಿ ಸಲ್ಲಿಸಿದ್ದರು ಮುನೇಗೌಡ. ಒಂದು ತಿಂಗಳಲ್ಲಿ ಬರಬೇಕಿದ್ದ ಚಾಲನಾ ಪರವಾನಗಿ ಇಲ್ಲಿಯವರೆಗೂ ಬಂದಿಲ್ಲ. ಅಲೆದು ಅಲೆದು ಬೇಸರಗೊಂಡು ಇದೀಗ ರಾಷ್ಟ್ರಪತಿಗಳಿಗೆ ಪತ್ರವನ್ನು ಬರೆದಿದ್ದಾರೆ.
ಇನ್ನು ಆರ್ಟಿಓ ಕಚೇರಿಯಲ್ಲಿ ಪರವಾನಗಿ ಕೇಳಿದ್ದಕ್ಕೆ ಮಧ್ಯವರ್ತಿಯೊಬ್ಬರ ಬಳಿ ಇದೆ ಪಡೆದುಕೊಳ್ಳಿ ಎಂದು ಹೇಳಿದ್ದಾರಂತೆ. ಆ ಮಧ್ಯವರ್ತಿ ಹಣದ ಬೇಡಿಕೆ ಇಟ್ಟಿದ್ದು ನವೀಕರಣವಾಗಿರುವ ಚಾಲನಾ ಪರವಾನಗಿ ಕೊಡಲು ಸತಾಯಿಸುತ್ತಿದ್ದಾರಂತೆ. ಹೀಗಾಗಿ ಆಯುಕ್ತರಿಂದ ಮುಖ್ಯ ಮಂತ್ರಿಯ ವರೆಗೂ ಪತ್ರ ಬರೆದು ಮನವಿ ಕೊಟ್ಟಿದ್ದಾರೆ ಮುನೇಗೌಡ. ಇದೀಗ ರಾಷ್ಟ್ರಪತಿಯವರಿಗೂ ಪತ್ರ ಬರೆದಿದ್ದಾರೆ. ನವೀಕರಣಗೊಂಡ ಚಾಲನ ಪರವಾನಗಿ ಕೊಡಿಸಿ ಇಲ್ಲ ದಯಾಮರಣಕ್ಕೆ ಮೊರೆಯಿಡುವಂತಾಗಲಿದೆ ಎಂದು ಹೇಳಿದ್ದಾರೆ.