ಕ್ಯಾಲಿಫೋರ್ನಿಯಾ: ಮದುವೆ ಫೋಟೋ ಶೂಟ್ ಎಂಬುದು ಪ್ರತಿ ದಂಪತಿಯ ಜೀವನ ಪುಸ್ತಕದ ಒಂದು ಪ್ರಮುಖ ನೆನಪಿನ ಪುಟ. ಬೀಚ್‌ನಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದ ಸುಂದರ ಜೋಡಿ ನೋಡಿ ಅಲೆಗೂ ಮಾತ್ಸರ್ಯವಾದಂತಿದೆ. ನವ ದಂಪತಿಯನ್ನು ಎತ್ತಿಕೊಂಡು ಹೋಗಲು ಸಮುದ್ರದ ಅಲೆ ಯತ್ನಿಸಿಬಿಟ್ಟಿತ್ತು. ಆದರೆ, ಸ್ಥಳೀಯರು ಇಬ್ಬರನ್ನೂ ರಕ್ಷಿಸಿದ್ದಾರೆ.
ಹೌದು, ನವ ವಿವಾಹಿತರು ಫೋಟೋ ಶೂಟ್ ಸಂದರ್ಭದಲ್ಲಿ ಅಬ್ಬರದ ಸಮುದ್ರದ ಅಲೆಗೆ ಸಿಲುಕಿದ ಘಟನೆ ಕ್ಯಾಲಿಫೋರ್ನಿಯಾದ ಲಾಂಗುನಾ ಬೀಚ್ ನಲ್ಲಿ ನಡೆದಿದೆ.
ಬಿಳಿ ಗೌನ್ ಹಾಕಿದ್ದ ವಧು, ಬಿಳಿಯ ಸೂಟ್ ಧರಿಸಿದ್ದ ವರ ಲಾಂಗೂನಾ ಬೀಚ್‌ನ ಪ್ರಸಿದ್ಧ ಫೋಟೋ ಶೂಟ್ ಪಾಯಿಂಟ್‌ನಲ್ಲಿ ನಿಂತು ವಿವಿಧ ಭಾವ, ಭಂಗಿಗಳಲ್ಲಿ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಬಂದ ಅಬ್ಬರದ ಅಲೆಗೆ ಇಬ್ಬರೂ ಕೊಚ್ಚಿ ಹೋಗಿದ್ದರು. ಬೀಚ್ ಲೈಫ್‌ಗಾರ್ಡ್ ಸಿಬ್ಬಂದಿ ಹಾಗೂ ಸ್ಥಳೀಯ ರಕ್ಷಣಾ ತಂಡದವರು ತಕ್ಷಣ ಕಾರ್ಯಪ್ರವೃತ್ತರಾಗಿ ಗಾಳಿ ತುಂಬಿದ ರಬ್ಬರ್ ಟ್ಯೂಬ್‌ಗಳ ಮೂಲಕ ದೂಡುತ್ತ ಇಬ್ಬರನ್ನೂ ದಡ ಸೇರಿಸಿ ರಕ್ಷಿಸಿದ್ದಾರೆ. ಯಾರಿಗೂ ಗಾಯವಾಗಿಲ್ಲ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಈ ಸನ್ನಿವೇಶಗಳನ್ನು ಬೀಚ್‌ನ ಮೌಂಟೇಜ್ ಹೋಟೆಲ್‌ನಲ್ಲಿ ನಿಂತ ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದಾನೆ. ವಿಡಿಯೋ ಸಖತ್ ವೈರಲ್ ಆಗಿದೆ. ಆದರೆ, ಯುವ ಜೋಡಿಯ ಹೆಸರು ತಿಳಿದು ಬಂದಿಲ್ಲ.