ಕೆಲವರಿಗೆ ದಿನಾ ದೋಸೆ ತಿಂದರೂ ಬೇಸರವಾಗುವುದಿಲ್ಲ. ವಿಧ ವಿಧವಾದ ದೋಸೆ ಮಾಡಿಕೊಂಡು ಸವಿಯುವ ಆಸೆ ಇರುತ್ತದೆ. ಅಂತವರಿಗೆ ಇಲ್ಲಿ ಅವಲಕ್ಕಿ ದೋಸೆ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
1 ಕಪ್ – ಅಕ್ಕಿ, ¼ ಕಪ್ – ಉದ್ದಿನಬೇಳೆ, ¼ ಟೀ ಸ್ಪೂನ್ – ಮೆಂತೆಕಾಳು, 1 ಕಪ್ – ತೆಳು ಅವಲಕ್ಕಿ, ¾ ಕಪ್ – ಮೊಸರು, ನೀರು – ಅಗತ್ಯವಿರುವಷ್ಟು, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – ಸ್ವಲ್ಪ.
ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ, ಉದ್ದಿನಬೇಳೆ, ಮೆಂತೆಕಾಳು ಹಾಕಿ ಚೆನ್ನಾಗಿ ತೊಳೆದು 4 ಗಂಟೆಗಳ ಕಾಲ ನೆನೆಸಿಡಿ. ನಂತರ ಈ ನೀರನ್ನು ಸೋಸಿಕೊಂಡು ಇದನ್ನು ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ನಂತರ ಮೊಸರು, ಅವಲಕ್ಕಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನೀರು ಬೇಕಿದ್ದರೆ ಸೇರಿಸಿಕೊಳ್ಳಿ. ಇದನ್ನು ಅಕ್ಕಿ, ಉದ್ದು ಮಿಶ್ರಣವಿರುವ ಪಾತ್ರೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದು ದೋಸೆ ಹಿಟ್ಟಿನ ಹದಕ್ಕೆ ಇರಲಿ. 8 ಗಂಟೆಗಳ ಹೊತ್ತು ಹಾಗೇಯೇ ಬಿಡಿ. ಮರುದಿನ ಬೆಳಿಗ್ಗೆ ಉಪ್ಪು, ಸೇರಿಸಿಕೊಂಡು ಮಿಕ್ಸ್ ಮಾಡಿ. ಗ್ಯಾಸ್ ಮೇಲೆ ದೋಸೆ ತವಾ ಇಟ್ಟು ಈ ಹಿಟ್ಟನ್ನು ಹಾಕಿ. ಎರಡು ಕಡೆ ಚೆನ್ನಾಗಿ ಬೇಯಿಸಿಕೊಂಡು ಕಾಯಿ ಚಟ್ನಿ ಜತೆ ಸವಿಯಿರಿ.