ಕೊರೊನಾ ಮಹಾಮಾರಿ ತನ್ನ ಆರ್ಭಟವನ್ನ ದಿನದಿಂದ ದಿನಕ್ಕೆ ಹೆಚ್ಚು ಮಾಡುತ್ತಲೇ ಇದೆ. ಬೆಂಗಳೂರಿನಲ್ಲಿ ನಿನ್ನೆಯೂ ಕೂಡ ಸುಮಾರು 700 ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಮನುಕುಲವನ್ನು ಬಿಟ್ಟು ಬಿಡದೇ ಕಾಡುತ್ತಿರುವ ವೈರಸ್ ಗೆ ಮದ್ದು ಕಂಡು ಹಿಡಿಯುವಲ್ಲಿ ವೈದ್ಯರ ತಂಡ ನಿರತವಾಗಿದೆ. ಆದರೆ ಆಯುರ್ವೇದದ ಮೂಲಕ ಈ ವೈರಸ್ ಗೆ ಕಡಿವಾಣ ಹಾಕಬಹುದು ಎನ್ನಲಾಗುತ್ತಿದೆ.
ಹೌದು, ಕೊರೋನಾ ವೈರಸ್‌ಗೆ ಆಯುರ್ವೇದದಲ್ಲಿ ಔಷಧವನ್ನು ಕಂಡು ಹಿಡಿದಿದ್ದಾರೆ ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ. ಇದರ ಪ್ರಯೋಗ ಮಾಡಲು ಅನುಮತಿಯನ್ನ ಸರ್ಕಾರದ ಬಳಿ ಕೇಳಿದ್ದರು. ಈ ಅನುಮತಿ ಸಿಕ್ಕ ನಂತರ ಪ್ರಯೋಗಕ್ಕೆ ಮುಂದಾಗಿದ್ದರು. ಇದೀಗ ಈ ಪ್ರಯೋಗ ಸಕ್ಸಸ್ ಆಗಿದ್ದು, ರೋಗಿಗಳ ಮೇಲೂ ಪ್ರಯೋಗ ಮಾಡಲಾಗಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದರ ಪ್ರಯೋಗ ನಡೆದಿದ್ದು, 23 ವರ್ಷದಿಂದ 65 ವರ್ಷದವರೆಗಿನ ಕೊರೊನಾ ರೋಗಿಗಳಿಗೆ ಈ ಚಿಕಿತ್ಸೆ ನೀಡಲಾಗಿದೆ. ಬೇರೆ ಬೇರೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವವರು ಸೇರಿದಂತೆ 10 ಜನ ಸೋಂಕಿತರು ಆಯುರ್ವೇದ ಮಾತ್ರೆಗಳನ್ನು ಸೇವಿಸಿ ಗುಣಮುಖರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೂ ಆಯುರ್ವೇದ ಚಿಕಿತ್ಸೆ ವಿಧಾನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕುರಿತು ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿಗೆ ವರದಿ ನೀಡಲು ತಿಳಿಸಲಾಗಿದೆ. ಹೆಚ್ಚಿನ ಸೋಂಕಿತರಿಗೆ ಮತ್ತು ಮುಂಜಾಗ್ರತಾ ದೃಷ್ಟಿಯಿಂದ ಸೋಂಕಿತ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿಗೆ ಈ ಔಷಧ ನೀಡಬಹುದಾ ಎಂಬುದನ್ನು ಸರ್ಕಾರ ನಿರ್ಧರಿಸಲಿದೆ.