ಕೆಲವೊಮ್ಮೆ ವೈದ್ಯೋ ನಾರಾಯಣ ಹರಿ ಎಂಬುದು ಸುಳ್ಳಾಗಿ ಬಿಡುತ್ತೆ. ಪ್ರಾಣ ಉಳಿಸಬೇಕಾದ ವೈದ್ಯರು ಪ್ರಾಣ ಹೋಗಲು ಕಾರಣರಾಗಿ ಬಿಡುತ್ತಾರೆ. ಅವರ ನಿರ್ಲಕ್ಷ್ಯದಿಂದಾಗಿ ಬಾಳಿ ಬದುಕಬೇಕಾದ ಎಷ್ಟೋ ಜೀವಗಳು ಮಸಣ ಸೇರಿವೆ. ಇದೀಗ ಇಂತಹದ್ದೇ ಘಟನೆಯೊಂದು ಉತ್ತರಪ್ರದೇಶದ ಕೌನೌಜ್ ನಲ್ಲಿ ನಡೆದಿದೆ.
ಹೌದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ತಂದೆಯೊಬ್ಬರು ಸಾವನ್ನಪ್ಪಿದ ಮಗುವನ್ನು ಅಪ್ಪಿಕೊಂಡು ಕಣ್ಣೀರಿಡುತ್ತಿದ್ದಾರೆ. ಈ ವಿಡಿಯೋದಲ್ಲಿ ಅವರು ಅಳುತ್ತಾ, ಮಗುವಿಗೆ ಚಿಕಿತ್ಸೆ ನೀಡಿದ್ದರೆ ನನ್ನ ಮಗ ಉಳಿಯುತ್ತಿದ್ದ ಎಂದು ಹೇಳಿದ್ದಾರೆ. ಪ್ರೇಮ್ ಚಂದ್ ಹಾಗೂ ಆಶಾದೇವಿ ದಂಪತಿಯ ಮಗ ಅನುಜ್ ತೀವ್ರ ಜ್ವರದಿಂದ ಬಳಲುತ್ತಿದ್ದ. ಆ ಮಗುವನ್ನು ಅಲ್ಲಿನ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ದುರಾದೃಷ್ಟವಶಾತ್ ಯಾವುದೇ ವೈದ್ಯರು ಆ ಮಗುವಿಗೆ ಚಿಕಿತ್ಸೆ ನೀಡಿಲ್ಲ.
ಸುಮಾರು ನಲವತ್ತೈದು ನಿಮಿಷ ಕಾದು ಕುಳಿತರೂ ಒಬ್ಬ ವೈದ್ಯರೂ ಬಂದು ಮಗುವನ್ನು ನೋಡಿಲ್ಲ. ಚಿಕಿತ್ಸೆ ನೀಡಿದ್ದರೆ ನನ್ನ ಮಗ ಉಳಿಯುತ್ತಿದ್ದ ಎಂದು ಆಸ್ಪತ್ರೆ ಮುಂದೆ ಮಗುವನ್ನು ಅಪ್ಪಿ ಗೋಳಾಡಿದ್ದಾರೆ ಪ್ರೇಮ್ ಚಂದ್. ಆದರೆ ಈ ಆರೋಪವನ್ನು ಆಸ್ಪತ್ರೆ ಸಿಬ್ಬಂದಿ ತಳ್ಳಿಹಾಕಿದ್ದಾರೆ.