ಹೈದರಾಬಾದ್: ಕೊರೊನಾ ವಿರುದ್ಧ ಭಾರತದ ಮೊದಲ ಲಸಿಕೆ ಕೊವ್ಯಾಕ್ಸಿನ್ ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಅಫ್ ಇಂಡಿಯಾ(ಡಿಸಿಜಿಐ) ಅನುಮತಿ ನೀಡಿದೆ.
ಹೈದರಾಬಾದ್ ಮೂಲದ ಲಸಿಕೆ ತಯಾರಕ ಕಂಪನಿ ಭಾರತ್ ಬಯೋಟೆಕ್ ಗೆ ಡಿಸಿಜಿಐ ಅನುಮತಿ ನೀಡಿದೆ. ಸುರಕ್ಷತೆ ಮತ್ತು ಪ್ರತಿರಕ್ಷಣೆ ಪ್ರತಿಕ್ರಿಯೆ ಪ್ರದರ್ಶಿಸುವ ಮೂಲಕ ಕಂಪನಿಯು ಪೂರ್ವಭಾವಿ ಅಧ್ಯಯನಗಳಿಂದ ಕಂಡುಕೊಂಡ ಫಲಿತಾಂಶಗಳನ್ನು ಸಲ್ಲಿಸಿದ ನಂತರ ಭಾರತದ ಮೊದಲ ಕೊರೋನಾ ಲಸಿಕೆ ಕೊವ್ಯಾಕ್ಸಿನ್ ಬಳಸಿ ಮಾನವ ಕ್ಲಿನಿಕಲ್ ಪ್ರಯೋಗಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ.
ಹೈದರಾಬಾದ್ ನ ಜಿನೋಮ್ ವ್ಯಾಲಿಯ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಸಿಕೆಗೆ ಕೊವ್ಯಾಕ್ಸಿನ್ ಎಂದು ಹೆಸರಿಡಲಾಗಿದೆ. ಇದು ದೇಶದ ಮೊದಲ ಸ್ಥಳೀಯ ಲಸಿಕೆಯಾಗಿದ್ದು ಕೊರೊನಾ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ತಿಳಿಸಿದ್ದಾರೆ.