ಬೆಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿಯಿಂದ ರಾಜ್ಯಕ್ಕೆ 742 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಈ ಅನುದಾನದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ 232 ಕೋಟಿ ರೂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 70 ಕೋಟಿ ರೂ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 50 ಕೋಟಿ ರೂ. ಪೊಲೀಸ್ ಇಲಾಖೆಗೆ 12 ಕೋಟಿ ರೂ. ರೈಲ್ವೇ ಇಲಾಖೆಗೆ 13 ಕೋಟಿ ರೂ. ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 2.89 ಕೋಟಿ ರೂ. ಸೇರಿದಂತೆ 379.89 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರದ ಅನುದಾನದಲ್ಲಿ ಇನ್ನೂ 362.11 ಕೋಟಿ ರೂ ಲಭ್ಯವಿದೆ. ಇದನ್ನೂ ಕೂಡಾ ಕೋವಿಡ್ ನಿಯಂತ್ರಣಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಹಾಸಿಗೆ ವ್ಯವಸ್ಥೆ
ಬೆಂಗಳೂರಿನಲ್ಲಿ ಕೋವಿಡ್ ಕೇರ್ ಸೆಂಟರ್‍ಗಳನ್ನು ಹೆಚ್ಚು ಮಾಡಲು ಈಗಾಗಲೇ ಆರ್ಟ್ ಆಫ್ ಲಿವಿಂಗ್‍ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಇಲ್ಲಿ 176 ಹಾಸಿಗೆಗಳಿಗೆ ವ್ಯವಸ್ಥೆ ಮಾಡಬಹುದಾಗಿದೆ. ಹಜ್ ಭವನದಲ್ಲಿ 432 ಹಾಸಿಗೆಗಳು, ಕೃಷಿ ವಿಶ್ವವಿದ್ಯಾಲಯದಲ್ಲಿ 1000 ಹಾಸಿಗಗಳು, ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ 250 ಹಾಸಿಗೆಗಳು, ಸರ್ಕಾರಿ ಆರ್ಯುವೇದ ವಸತಿ ನಿಲಯದಲ್ಲಿ 300 ಹಾಸಿಗೆಗಳು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 1000 ಹಾಸಿಗೆಗಳು ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನಾ ಕೇಂದ್ರದಲ್ಲಿ 5000 ಹಾಸಿಗೆಗಳನ್ನು ವ್ಯವಸ್ಥೆ ಮಾಡಲು ಕ್ರಮವಹಿಸಲಾಗಿದೆ.
ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ದಾಖಲಾಗುವ ರೋಗಿಗಳಿಗೆ ಹಾಗೂ ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಒಳ್ಳಯ ಊಟದ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗಿದೆ. ಬೆಂಗಳೂರಿನ ತಾಜ್ ಹೋಟೆಲ್, ಹೋಟೆಲ್ ಏಟ್ರಿಯಾ ಹಾಗೂ ಇಸ್ಕಾನ್ ವತಿಯಿಂದ ಊಟದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಕೋವಿಡ್ ರೋಗಿಗಳು ಮಧುಮೇಹಿಗಳಾಗಿದ್ದಲ್ಲಿ ಅವರಿಗೆ ಹೊಂದುವಂತಹ ಊಟವನ್ನು, ಕಿಡ್ನಿ ಸಮಸ್ಯೆಯಿಂದ ಬಳಲುವ ಕೋವಿಡ್ ರೋಗಿಗಳಿಗೆ ಅವರಿಗೆ ಹೊಂದುವಂತಹ ಊಟವನ್ನು ಹಾಗೂ ಸಾಮಾನ್ಯ ಜನರು ಕೋವೀಡ್ ರೋಗಿಗಳಾಗಿದ್ದಲ್ಲಿ ಅವರಿಗೆ ಪೂರಕವಾಗುವ ಊಟವನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ.
ಅದೇ ರೀತಿ ಮಕ್ಕಳಿಗೆ ಹೊಂದುವಂತಹ ಊಟವನ್ನು ಮಕ್ಕಳಿಗೆ ಹಾಗೂ ಆಹಾರ ಸೇವನೆ ಮಾಡದ ರೋಗಿಗಳಿಗೆ ದ್ರವ ರೂಪದ ಆಹಾರವನ್ನು ನೀಡಲಾಗುತ್ತಿದೆ. ಮಧುಮೇಹಿಗಳನ್ನು ನೋಡಿಕೊಳ್ಳಲು ಪ್ರತಿ ಸೆಂಟರ್‍ನಲ್ಲಿ ಓರ್ವ ಮಧುಮೇಹಿ ವೈದ್ಯರನ್ನು ನೇಮಿಸಲಾಗುವುದು. ರೋಗಿಗಳಿಗೆ ಪ್ರತಿ ದಿನ ಬೆಳಿಗ್ಗೆ 7-30 ಗಂಟೆಗೆ ಉಪಾಹಾರ, 10-30 ಗಂಟೆಗೆ ಸ್ನಾಕ್ಸ್, ಮಧ್ಯಾಹ್ನ 1-00 ಗಂಟೆಗೆ ಬೋಜನ, ಮಧ್ಯಾಹ್ನ 3-30 ಗಂಟೆಗೆ ಲಘು ಉಪಾಹಾರ ಸಂಜೆ 5-00 ಗಂಟೆಗೆ ಕಾಫಿ ಅಥವಾ ಟೀ ಹಾಗೂ ರಾತ್ರಿ 7-00 ಗಂಟೆಗೆ ಊಟವನ್ನು ಸರ್ಕಾರವೇ ಉಚಿತವಾಗಿ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹಾಗೂ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್, ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್ ಮಂಜುನಾಥ್ ಪ್ರಸಾದ್ ಹಾಜರಿದ್ದರು.