ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಹುಲಿಕುಂಟೆ ಗ್ರಾಮದ ಕೆರೆಯಲ್ಲಿ ಯುವತಿ ಮೃತದೇಹ ಪತ್ತೆಯಾಗಿದ್ದು ಕೊಲೆ ರಹಸ್ಯ ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರ ತಾಲೂಕಿನ ತುಮಕುಂಟೆ ನಿವಾಸಿ ಸಂಧ್ಯಾ(17) ಕೊಲೆಯಾದ ಯುವತಿ. ತುಮಕುಂಟೆಯ ಆಕೆಯ ತಾಯಿ ರಾಮಾಂಜಿನಮ್ಮ, ಅಣ್ಣ ಅಶೋಕ್, ಗೌರಿಬಿದನೂರು ತಾಲ್ಲೂಕು ರೆಡ್ಡಿ ದ್ಯಾವರಹಳ್ಳಿಯಲ್ಲಿರುವ ಸಹೋದರಿ ನೇತ್ರಾವತಿ ಮತ್ತು ಸಹೋದರಿಯ ಗಂಡ ಬಾಲಕೃಷ್ಣ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಯುವತಿ ಸಂಧ್ಯಾ ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದು, ಆತನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ಆಕೆ ಅಪ್ರಾಪ್ತೆಯಾಗಿದ್ದ ಕಾರಣ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ಜೈಲು ಸೇರಿಕೊಂಡಿದ್ದಾನೆ.
ಮನೆಯಲ್ಲಿ ಇದ್ದ ಸಂಧ್ಯಾಗೆ ಪೋಷಕರು ಬೃಎ ಮದುವೆ ಮಾಡಲು ಬುದ್ಧಿಮಾತು ಹೇಳಿದ್ದಕ್ಕೆ ಕೇಳದೆ ಜೈಲಿನಲ್ಲಿರುವ ಪ್ರೀತಿಸಿದ ಯುವಕನನ್ನು ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಇದರಿಂದ ಆಕ್ರೋಶಗೊಂಡ ತಾಯಿ, ಸಹೋದರ, ಸಹೋದರಿ ಹಾಗೂ ಭಾವ ಆಕೆಯನ್ನು ಕೊಲೆ ಮಾಡಿ ಮೃತದೇಹಕ್ಕೆ ಕಲ್ಲುಕಟ್ಟಿ ಕೆರೆಗೆ ಎಸೆದಿದ್ದಾರೆ. ಜೂನ್ 23 ರಂದು ಮೃತದೇಹ ಪತ್ತೆಯಾಗಿದ್ದು ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.