ಹೈದರಾಬಾದ್ ನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು 15 ದಿನ ಸಂಪೂರ್ಣ ಲಾಕ್ಡೌನ್ ಮಾಡಲು ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಚಿಂತನೆ ನಡೆಸಿದ್ದಾರೆ.
ಈ ಕುರಿತು ಸಚಿವರು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಲಾಕ್ಡೌನ್ ಜಾರಿಯಾದಲ್ಲಿ ಅದನ್ನು ಕಠಿಣವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಎಲ್ಲಾ ಕ್ರಮ ಕೈಗೊಳ್ಳಬೇಕು. ಅಗತ್ಯ ವಸ್ತುಗಳ ಖರೀದಿಗೆ ಕನಿಷ್ಠ ಮೂರು ಗಂಟೆ ಸಮಯ ನೀಡಬೇಕು. ರೈಲು ವಿಮಾನ ಸೇವೆಯನ್ನು ಸಂಪೂರ್ಣ ಬಂದ್ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಜೂನ್ 30ರ ವರೆಗೂ ಲಾಕ್ಡೌನ್ ಜಾರಿಯಲ್ಲಿದ್ದು ಅನೇಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇನ್ನು 15 ದಿನ ಹೈದರಾಬಾದ್ ನಗರವನ್ನು ಸಂಪೂರ್ಣ ಲಾಕ್ ಡೌನ್ ಮಾಡಲು ಸಮಾಲೋಚನೆ ನಡೆಸಲಾಗಿದೆ.
ಹೈದರಾಬಾದ್ ನಲ್ಲಿ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿ ಮುನ್ನುಗ್ಗುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸಿ 15 ದಿನ ಲಾಕ್ಡೌನ್ ಜಾರಿಗೆ ಸಿಎಂ ಚಂದ್ರಶೇಖರ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.