ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ತನ್ನ ಅಬ್ಬರ ಹೆಚ್ಚಿಸಿಕೊಳ್ಳುತ್ತಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಈಗಾಗಲೇ ಸಮುದಾಯಕ್ಕೂ ಹಬ್ಬಿದೆಯಾ ಎಂಬ ಅನುಮಾನ ಕಾಡತೊಡಗಿದ್ದು, ಹೀಗಾಗಿ ರಾಂಡಮ್ ಟೆಸ್ಟ್ ನಡೆಸಲು ತೀರ್ಮಾನಿಸಲಾಗಿತ್ತು.
ಆದರೆ ಟೆಸ್ಟ್ ನಡೆಸಿದ ಬಳಿಕ ವರದಿ ಕೈ ಸೇರಲು ಮೂರ್ನಾಲ್ಕು ದಿನಗಳು ತಗುಲುತ್ತಿದ್ದು, ಟೆಸ್ಟ್ ಮಾಡಿಸಿಕೊಂಡವರು ಒಂದೊಮ್ಮೆ ಕೊರೊನಾ ಪಾಸಿಟಿವ್ ಬಂದರೆ ಅಷ್ಟರೊಳಗಾಗಿ ಬಹಳಷ್ಟು ಓಡಾಟ ನಡೆಸಿರುತ್ತಿದ್ದ ಕಾರಣ ಮತ್ತಷ್ಟು ಮಂದಿಗೆ ಸೋಂಕು ತಗುಲಿರುತ್ತಿತ್ತು.
ಇದೀಗ ಕೊರೊನಾ ಟೆಸ್ಟ್ ಕುರಿತು ನೆಮ್ಮದಿಯ ಸುದ್ದಿಯೊಂದು ಹೊರಬಿದ್ದಿದ್ದು, ಶ್ವಾಸಕೋಶದ ರಕ್ತ ಸಂಚಯ ಪರೀಕ್ಷೆ ಯಂತ್ರದ ಮೂಲಕ ಕೇವಲ ಎರಡು ನಿಮಿಷದಲ್ಲಿ ವರದಿ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ಸಮ್ಮುಖದಲ್ಲೇ ಕಂಪನಿಯೊಂದು ಪ್ರಾತ್ಯಕ್ಷಿಕೆ ನೀಡಿದ್ದು, ಶೇಕಡಾ 95ರಷ್ಟು ನಿಖರ ಫಲಿತಾಂಶ ಸಿಗಲಿದೆ ಎನ್ನಲಾಗಿದೆ. ಹೀಗಾಗಿ ಯಂತ್ರದ ಮೂಲಕ ಮೊದಲ ಹಂತದಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯ ಸಿಬ್ಬಂದಿ, ಪೊಲೀಸರು, ಬಸ್ – ರಿಕ್ಷಾ ಚಾಲಕರಿಗೆ ಕೊರೊನಾ ಟೆಸ್ಟ್ ನಡೆಸಲು ತೀರ್ಮಾನಿಸಲಾಗಿದೆ.