ನವದೆಹಲಿ: ನೌಕರರು, ಉದ್ಯೋಗಿಗಳು ಪಡೆದುಕೊಳ್ಳುವ ಪ್ರಯಾಣ ಭತ್ಯೆಗೆ ತೆರಿಗೆ ವಿನಾಯಿತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಕಡಿಮೆ ತೆರಿಗೆ ದರಗಳ ಹೊಸ ವ್ಯವಸ್ಥೆಯಡಿ ನೌಕರರು, ಉದ್ಯೋಗಿಗಳು ಮಾಲೀಕರಿಂದ ಪಡೆದುಕೊಳ್ಳುವ ಪ್ರಯಾಣ ಭತ್ಯೆಗೆ ತೆರಿಗೆ ವಿನಾಯಿತಿ ಪಡೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.
ಕೇಂದ್ರೀಯ ನೇರ ತೆರಿಗೆ ಮಂಡಳಿ(CBDT) ಆದಾಯ ತೆರಿಗೆ ನಿಯಮಗಳಿಗೆ ತಿದ್ದುಪಡಿ ತಂದಿದ್ದು ಕಡಿಮೆ ತೆರಿಗೆ ದರಗಳ ಹೊಸ ವ್ಯವಸ್ಥೆಯಡಿ ಈ ಅವಕಾಶ ನೀಡಿದೆ. ವರ್ಗಾವಣೆ ಉದ್ದೇಶದ ಪ್ರಯಾಣ, ಕರ್ತವ್ಯ ನಿರ್ವಹಣೆ ಉದ್ದೇಶಕ್ಕೆ ಮಾಡಿದ ಪ್ರಯಾಣ ಭತ್ಯೆಗೆ ವಿನಾಯಿತಿ ಪಡೆಯಬಹುದು.
2021ರ ಏಪ್ರಿಲ್ ನಿಂದ ಹೊಸ ನಿಯಮ ಜಾರಿಗೆ ಬರಲಿದ್ದು ಮುಂದಿನ ಹಣಕಾಸು ವರ್ಷಕ್ಕೆ ಅನ್ವಯವಾಗಲಿದೆ ಎಂದು ಹೇಳಲಾಗಿದೆ. ತೆರಿಗೆದಾರರಿಗೆ ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಹಂತ ಬದಲಾಗಲಿದ್ದು, ತೆರಿಗೆ ದರ ಕಡಿಮೆ ಇರುತ್ತದೆ. ಅದರಲ್ಲಿ ಉದ್ಯೋಗಿಗಳು ಪಡೆದುಕೊಂಡ ಪ್ರಯಾಣ ಭತ್ಯೆಗೆ ವಿನಾಯಿತಿ ಪಡೆಯಲು ಅವಕಾಶ ನೀಡಲಾಗಿದೆ. ಹಳೆ ತೆರಿಗೆ ವ್ಯವಸ್ಥೆಯಲ್ಲಿ ವಿನಾಯಿತಿ ಸೌಲಭ್ಯ, ನಿರ್ಧಿಷ್ಟ ತೆರಿಗೆ ಕಡಿತ ಸೌಲಭ್ಯ ನೀಡಲಾಗಿದೆ ಎಂದು ಹೇಳಲಾಗಿದೆ.