ಭಾರತದಲ್ಲಿ ಕಳೆದ 21 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗಿದ್ದು, 22 ನೇ ದಿನವಾದ ಇಂದು ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ಈ ಬೆಲೆ ಏರಿಕೆ ನೆರೆಯ ಪಾಕಿಸ್ತಾನದಲ್ಲೂ ಮುಂದುವರೆದಿದ್ದು, ಅಲ್ಲಿನ ಜನತೆಯನ್ನು ಬೆಚ್ಚಿಬೀಳಿಸಿದೆ.
ಶುಕ್ರವಾರ ಒಂದೇ ದಿನ ಪೆಟ್ರೋಲ್ ಬೆಲೆಯಲ್ಲಿ 25.58 ರೂಪಾಯಿ ಏರಿಕೆಯಾಗಿದ್ದು, ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಈಗ 100.10 ರೂಪಾಯಿ ತಲುಪಿದೆ. ಡೀಸೆಲ್ ಬೆಲೆಯಲ್ಲೂ ಏರಿಕೆಯಾಗಿದ್ದು, ಪ್ರತಿ ಲೀಟರ್ ಬೆಲೆ ಈಗ 101.46 ರೂಪಾಯಿ ತಲುಪಿದೆ.
ಈ ಮೊದಲೇ ಪಾಕಿಸ್ತಾನ ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೊರೊನಾ ಮಹಾಮಾರಿ ಅಲ್ಲಿನವರ ಬದುಕನ್ನು ಕಂಗೆಡಿಸಿದೆ. ಇದರ ಜೊತೆಗೆ ಪೆಟ್ರೋಲ್ ಹಾಗೂ ಡೀಸೆಲ್ ದರ ಮುಗಿಲು ಮುಟ್ಟಿರುವುದರಿಂದ ದೈನಂದಿನ ಬಳಕೆಯ ವಸ್ತುಗಳ ಬೆಲೆ ಕೂಡಾ ಹೆಚ್ಚಾಗಿದೆ. ಈ ಎಲ್ಲದರ ಕಾರಣದಿಂದ ಅಲ್ಲಿನ ಸರ್ಕಾರದ ವಿರುದ್ಧ ಜನತೆಯ ಆಕ್ರೋಶ ಭುಗಿಲೇಳುತ್ತಿದೆ.