ಜೂನ್ 27ರ ಶನಿವಾರ ರಾಜ್ಯದ ಪಾಲಿಗೆ ಕರಾಳ ದಿನವಾಗಿದ್ದು, ಕೊರೊನಾ ಮಹಾಸ್ಪೋಟ ಸಂಭವಿಸಿದೆ. ಅಂದು ಬರೋಬ್ಬರಿ 918 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 596 ಮಂದಿ ಸೋಂಕು ಪೀಡಿತರಾಗಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.
ಇದು ರಾಜ್ಯ ಸರ್ಕಾರದ ಆತಂಕಕ್ಕೂ ಕಾರಣವಾಗಿದ್ದು, ಹೀಗಾಗಿ ಈ ಮೊದಲಿನಂತೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. 10ನೇ ತರಗತಿ ಪರೀಕ್ಷೆ ಮುಗಿದ ಬಳಿಕ ಅಂದರೆ ಜುಲೈ 5 ರಿಂದ ಪ್ರತಿ ಭಾನುವಾರ ರಾಜ್ಯದಾದ್ಯಂತ ಕರ್ಫ್ಯೂ ಮಾದರಿಯಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲು ತೀರ್ಮಾನಿಸಲಾಗಿದ್ದು, ಜೂನ್ 29ರ ನಾಳೆಯಿಂದ ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರಿಗೆ ಕರ್ಫ್ಯೂ ಜಾರಿಗೊಳಿಸಲಾಗುತ್ತದೆ.
ಜುಲೈ 10ರಿಂದ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಎಲ್ಲ ಕಚೇರಿಗಳ ನೌಕರರಿಗೆ ಒಂದು ತಿಂಗಳ ಕಾಲ ಪ್ರತಿ ಶನಿವಾರ ರಜೆ ನೀಡಲಾಗುತ್ತಿದ್ದು, ಕೆಲಸದ ದಿನಗಳನ್ನು 5 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಲಾಕ್ ಡೌನ್ ಹಾಗೂ ಕರ್ಫ್ಯೂ ಅವಧಿಯಲ್ಲಿ ಅಗತ್ಯ ವಸ್ತುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಅಲ್ಲದೆ ಗುಂಪು ಗುಂಪಾಗಿ ಸಾರ್ವಜನಿಕರು ಸೇರದಂತೆ ಕ್ರಮ ವಹಿಸಲಾಗುತ್ತದೆ.