ರಾಜಕೀಯ ದುರುದ್ದೇಶದಿಂದ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಪಕ್ಷದ ಕಾರ್ಯಕರ್ತರೊಬ್ಬರಿಗೆ ಕ್ವಾರಿ ಮೈನಿಂಗ್ ಮಾಡಲು ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಅವಕಾಶ ನೀಡುತ್ತಿಲ್ಲ. ಅವಕಾಶ ಕೊಡದೆ ಇದ್ದರೆ ಜೂನ್ 29 ರಂದು ಸಿಎಂ ಮನೆ ಎದುರು ಧರಣಿ ಕೂರುವುದಾಗಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ದೇವೇಗೌಡರು, ನನ್ನ ಸುದೀರ್ಘ 60 ವರ್ಷಗಳ ರಾಜಕಾರಣದಲ್ಲಿ ಎಂದೂ ಕಂಡಿಲ್ಲದ ಕೆಟ್ಟ ವಾತಾವರಣ ತಾಲೂಕಿನಲ್ಲಿ ನಿರ್ಮಾಣವಾಗಿದೆ. ನಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತ ಎಚ್.ಟಿ. ಮಂಜು ಎಂಬುವರ ಮೇಲೆ ಚುನಾವಣೆಯ ಸೇಡು ತೀರಿಸಿಕೊಳ್ಳಲು ಅಲ್ಲಿನ ಸಚಿವರು ಹೊರಟಿದ್ದಾರೆ. ಎಚ್.ಟಿ. ಮಂಜು ಅವರು ಸ್ಟೋನ್ ಕ್ರಷರ್ ಮತ್ತು ಕ್ವಾರಿ ಮೈನಿಂಗ್ ಮಾಡಲು ಸರ್ಕಾರದ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅನುಮತಿ ಪಡೆದುಕೊಂಡಿದ್ದರೂ ಸಹ ಸ್ಥಳೀಯ ರಾಜಕಾರಣದಿಂದ ಅವರಿಗೆ ತೊಂದರೆಯಾಗುತ್ತಿದೆ.
ಇದರ ಬಗ್ಗೆ ಮುಖ್ಯಮಂತ್ರಿ, ಡಿಸಿಎಂ ಸಚಿವರಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಕಾನೂನು ಬದ್ಧ ವ್ಯವಹಾರ ನಡೆಸಲು ಸರ್ಕಾರ ಬಿಡದಿದ್ದರೆ ಇದೇ ತಿಂಗಳ 29 ರಂದು ಸಿಎಂ ನಿವಾಸದ ಮುಂದೆ ಪಕ್ಷದ ಕಾರ್ಯಕರ್ತರೊಂದಿಗೆ ಧರಣಿ ಸತ್ಯಾಗ್ರಹ ಮಾಡುತ್ತೇನೆ. ಧರಣಿ ಬಿಟ್ಟು ಇನ್ನೇನು ಉಳಿದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.