ಕೊರೊನಾ ವೈರಸ್ ಭೀತಿಯಿಂದಾಗಿ ಕಳೆದ ಮೂರು ತಿಂಗಳಿಂದ ಬಂದ್ ಆಗಿದ್ದ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಜುಲೈ 1 ರಿಂದ ತೆರೆಯಲಿದ್ದು, ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಜೂನ್ 8 ರಿಂದಲೇ ದೇವಸ್ಥಾನ ತೆರೆಯಲು ಅವಕಾಶ ಇದ್ದರೂ ಭಕ್ತರು ಹಾಗೂ ಸಿಬ್ಬಂದಿಯ ಆರೋಗ್ಯ ದೃಷ್ಟಿಯಿಂದ ದೇವಸ್ಥಾನ ತೆರೆದಿರಲಿಲ್ಲ. ಆದರೆ ಇದೀಗ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಲು ಅನ್ನಪೂರ್ಣೇಶ್ವರಿ ಸಿದ್ದಳಾಗಿದ್ದಾಳೆ.
ಇನ್ನು ದೇವಸ್ಥಾನ ಬೆಳಗ್ಗೆ 7 ರಿಂದ ಸಂಜೆ 7 ರ ವರೆಗೆ ತೆರೆದಿರುತ್ತದೆ. ಚಿಕ್ಕ ಮಕ್ಕಳು ವೃದ್ಧರು ಹಾಗೂ ಗರ್ಭಿಣಿಯರಿಗೆ ದೇವಸ್ಥಾನ ಪ್ರವೇಶ ಇರುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಈ ರೀತಿಯ ನಿಯಮವನ್ನು ಪಾಲಿಸಲಾಗುತ್ತಿದೆ. ಒಮ್ಮೆ ದೇವಸ್ಥಾನ ಪ್ರವೇಶ ಮಾಡಿದರೆ ಪೂಜೆ ನಂತರ ಪ್ರಸಾದ ಸೇವಿಸಿಯೇ ಹೊರಹೋಗಬೇಕು.
ಇನ್ನು ದೇವಸ್ಥಾನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆನ್‌ಲೈನ್ ನಲ್ಲಿ ಪಾಸ್ ಪಡೆದುಕೊಂಡೇ ಬರಬೇಕು. ಆನ್‌ಲೈನ್ ನಲ್ಲಿ ದರ್ಶನದ ಟಿಕೆಟ್ ಇಲ್ಲದೇ ಇರುವವರಿಗೆ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧವಿರುತ್ತದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.