ರಾಜ್ಯದ ವಿವಿಧ ಕೋವಿಡ್ 19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ಸೋಂಕಿತರು ತಮಗೆ ಸಕಾಲಕ್ಕೆ ಒಳ್ಳೆಯ ಗುಣಮಟ್ಟದ ಆಹಾರ ನೀಡುತ್ತಿಲ್ಲವೆಂದು ಆರೋಪಿಸಿದ್ದರು. ಅಲ್ಲದೆ ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಅದು ವೈರಲ್ ಆಗಿತ್ತು.
ಇದೀಗ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಕೊರೊನಾ ಸೋಂಕಿತರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ನೀಡುವ ಆಹಾರದ ಮೆನು ಸಿದ್ಧಪಡಿಸಿದ್ದು, ಪ್ರತಿದಿನ ಮೂರು ಹೊತ್ತು ಆಹಾರ ನೀಡುವುದರ ಜೊತೆಗೆ ಎರಡು ಬಾರಿ ಸ್ನಾಕ್ಸ್ ನೀಡಲು ತೀರ್ಮಾನಿಸಲಾಗಿದೆ.
ಉಪಹಾರ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ನೀಡಲಿದ್ದು, ಸೋಮವಾರ ರವಾ ಇಡ್ಲಿ, ಮಂಗಳವಾರ ಪೊಂಗಲ್, ಬುಧವಾರ ಸೆಟ್ ದೋಸೆ, ಗುರುವಾರ ಅಕ್ಕಿ ಇಡ್ಲಿ, ಶುಕ್ರವಾರ ಬೇಳೆಬಾತ್, ಶನಿವಾರ ಚೌಚೌ ಬಾತ್ ಹಾಗೂ ಭಾನುವಾರ ಸೆಟ್ ದೋಸೆ ನೀಡಲಾಗುತ್ತದೆ.
ಇನ್ನು ಬೆಳಗಿನ 10 ಗಂಟೆಗೆ ಮೊದಲ ಸ್ನಾಕ್ಸ್ ನೀಡಲಿದ್ದು, ಸೋಮವಾರ ಕಲ್ಲಂಗಡಿ ಹಣ್ಣು – ರಾಗಿ ಗಂಜಿ, ಮಂಗಳವಾರ ಪಪ್ಪಾಯ – ಪಾಲಕ್ ಸೂಪ್, ಬುಧವಾರ ಮಸ್ಕ್ ಮೆಲನ್ – ರವಾ ಗಂಜಿ, ಗುರುವಾರ ಕಲ್ಲಂಗಡಿ ಹಣ್ಣು – ಕ್ಯಾರೆಟ್ ಸೂಪ್, ಶುಕ್ರವಾರ ಪಪ್ಪಾಯ – ರಾಗಿ ಗಂಜಿ, ಶನಿವಾರ ಮಸ್ಕ ಮಲನ್ – ಟೊಮೆಟೊ ಸೂಪ್ ಹಾಗೂ ಭಾನುವಾರ ಪಪ್ಪಾಯ – ರವಾ ಗಂಜಿ ನೀಡಲಾಗುತ್ತದೆ.
ಮಧ್ಯಾಹ್ನ 1 ಗಂಟೆಗೆ ಮತ್ತು ಸಂಜೆ 7 ಗಂಟೆಗೆ ಊಟ ನೀಡಲಿದ್ದು, ಇದಕ್ಕಾಗಿ ಎರಡು ಚಪಾತಿ, ಪಲ್ಯ, ಅನ್ನ, ದಾಲ್, ಮೊಸರು ಸಿದ್ಧಪಡಿಸಲಾಗಿದೆ. ಅಲ್ಲದೆ ಸಂಜೆ 5 ಗಂಟೆಗೆ ಸ್ನಾಕ್ಸ್ ನೀಡಲಾಗುತ್ತಿದ್ದು, ಏಲಕ್ಕಿ ಬಾಳೆಹಣ್ಣು, 3 ಬಿಸ್ಕೆಟ್, 2 ಪ್ರೋಟೀನ್ ಬಿಸ್ಕೆಟ್, 2 ಕರ್ಜೂರ, ವಿಟಮಿನ್-ಸಿ ಹೊಂದಿರುವ ಮ್ಯಾಂಗೋ ಬಾರ್ ನೀಡಲು ನಿರ್ಧರಿಸಲಾಗಿದ್ದು ರಾತ್ರಿ 9 ಗಂಟೆಗೆ ಫ್ಲೇವರ್ಡ್ ಮಿಲ್ಕ್ ನೀಡಲಾಗುತ್ತದೆ.