ದಾವಣಗೆರೆ: ಗರ್ಭಿಣಿಗೆ ಕೊರೊನಾ ಸೋಂಕು ತಗಲಿರುವುದಾಗಿ ಖಾಸಗಿ ಲ್ಯಾಬ್ ನಲ್ಲಿ ತಪ್ಪು ರಿಪೋರ್ಟ್ ನೀಡಿದ ಪರಿಣಾಮ ಹೆರಿಗೆ ನಂತರ ತಾಯಿಂದ ದೂರವಿರಿಸಿದ್ದ 6 ದಿನದ ನವಜಾತ ಶಿಶು ಸಾವನ್ನಪ್ಪಿದೆ.
ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ. ಇದಕ್ಕೆ ಮಗುವಿನ ತಾಯಿಗೆ ಕೊರೋನಾ ಪಾಸಿಟಿವ್ ಇದೆ ಎಂದು ತಪ್ಪು ವರದಿ ನೀಡಿರುವುದೇ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ.
ದಾವಣಗೆರೆಯ ಬೇತೂರು ರಸ್ತೆಯ ನಿವಾಸಿಯಾಗಿರುವ ಚಾಲಕನ ಪತ್ನಿಗೆ ಜೂನ್ 18ರಂದು ಖಾಸಗಿ ಲ್ಯಾಬ್ ನಲ್ಲಿ ಕೊರೋನಾ ಪಾಸಿಟಿವ್ ಇರುವ ವರದಿ ನೀಡಲಾಗಿತ್ತು. ಗರ್ಭಿಣಿಯಾಗಿದ್ದ ಮಹಿಳೆಯನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು ವೈದ್ಯರು ಸಹಜ ಹೆರಿಗೆ ಮಾಡಿಸಿದ್ದಾರೆ.
ಗಂಡು ಮಗು ಜನಿಸಿದ್ದು ಕೊರೋನಾ ಪಾಸಿಟಿವ್ ಇದೆ ಎಂದು ವರದಿ ಬಂದಿದ್ದರಿಂದ ತಾಯಿಂದ ಮಗುವನ್ನು ದೂರವಿಡಲಾಗಿದೆ. ಭೇಟಿಗೆ ಅವಕಾಶ ಇರಲಿಲ್ಲ. ಕೊರೋನಾ ಭಯದಿಂದ ಸರಿಯಾಗಿ ಆರೈಕೆ ಇಲ್ಲದೇ 6 ದಿನದ ನಂತರ ಮಗು ಮೃತಪಟ್ಟಿದೆ. ಕೊರೊನಾ ಸೋಂಕು ಇಲ್ಲದಿದ್ದರೂ ಇದೆ ಎಂದು ವರದಿ ನೀಡಿದ್ದರಿಂದ ಈ ಅವಘಡ ಉಂಟಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದು, ಸುಳ್ಳು ಮಾಹಿತಿ ನೀಡಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.