ಕೊರೊನಾ ವೈರಸ್ ನ ಕಾಟದಿಂದ ಜನರೆಲ್ಲಾ ಬೇಸತ್ತಿದ್ದಾರೆ. ಅದು ಅಲ್ಲದೇ, ಈಗ ಮುಖಕ್ಕೆ ಮಾಸ್ಕ್, ಕೈಗೆಲ್ಲಾ ಸ್ಯಾನಿಟೈಸರ್ ಇಲ್ಲದೇ ಹೊರಗೆ ಕಾಲಿಡುವುದಕ್ಕೆ ಭಯಪಡುತ್ತಿದ್ದಾರೆ. ಜೊತೆಗೆ ಹೊರಗಡೆಯಿಂದ ತಂದು ತಿನ್ನುವುದಕ್ಕೆ, ದಿನಸಿ ಸಾಮಾನು, ಹಣ್ಣು, ತರಕಾರಿ ತರುವುದಕ್ಕೂ ಆತಂಕವಾಗುತ್ತಿದೆ. ಸೋಂಕಿತರು ಯಾರಾದರೂ ಇದನ್ನು ಮುಟ್ಟಿದ್ದಾರೇನೋ ಎಂಬ ಭಯವೂ ಆವರಿಸಿಕೊಂಡಿದೆ.
ಹೀಗೆ ಅಂಗಡಿಯಿಂದ ತಂದ ತರಕಾರಿ, ಹಣ್ಣುಗಳನ್ನು ಸುಲಭವಾಗಿ ಕ್ಲೀನ್ ಮಾಡುವ ವಿಧಾನ ಇಲ್ಲಿದೆ ನೋಡಿ. ಇದನ್ನು ಅನುಸರಿಸಿ ತರಕಾರಿ, ಹಣ್ಣುಗಳನ್ನು ಸ್ವಚ್ಛಗೊಳಿಸಿ ಉಪಯೋಗಿಸಿ.
ಒಂದು ಅಗಲವಾದ ಪಾತ್ರೆಗೆ ನೀರು ಹಾಕಿ ಅದನ್ನು ಸ್ವಲ್ಪ ಬಿಸಿ ಮಾಡಿ. ಉಗುರು ಬೆಚ್ಚಗೆ ಆದರೆ ಸಾಕು. ಅದಕ್ಕೆ ಸ್ವಲ್ಪ ಕಲ್ಲುಪ್ಪು ಸೇರಿಸಿ ಹಣ್ಣು, ತರಕಾರಿಗಳನ್ನು ಹಾಕಿ ಚೆನ್ನಾಗಿ ತೊಳೆದು ನಂತರ ತಣ್ಣಗಿನ ನೀರಿನಿಂದ ಮತ್ತೊಮ್ಮೆ ತೊಳೆದು ಒಂದು ಕಾಟನ್ ಬಟ್ಟೆಯ ಮೇಲೆ ಇದನ್ನು ಹರವಿ ಹಾಕಿ. ನೀರೆಲ್ಲಾ ಆರಿದ ಮೇಲೆ ಉಪಯೋಗಿಸಿ.
ಇನ್ನೊಂದು ವಿಧಾನವೆಂದರೆ ಒಂದು ಅಗಲವಾದ ಪಾತ್ರೆಗೆ ನೀರು ಹಾಕಿ ಅದಕ್ಕೆ 2 ಚಮಚ ಬೇಕಿಂಗ್ ಸೋಡಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಈ ಹಣ್ಣು, ತರಕಾರಿಗಳನ್ನು ಹಾಕಿ 10 ನಿಮಿಷಗಳ ಕಾಲ ಹಾಗೆಯೇ ಇಡಿ. ನಂತರ ಈ ತರಕಾರಿಗಳನ್ನು ಇನ್ನೊಂದು ಪಾತ್ರೆಗೆ ಹಾಕಿಕೊಂಡು ಟ್ಯಾಪ್ ನೀರಿನ ಕೆಳಗೆ ಇಟ್ಟು ಚೆನ್ನಾಗಿ ತೊಳೆದು ಬಟ್ಟೆಯ ಮೇಲೆ ಹರವಿ ಹಾಕಿ. ಇದರಿಂದ ಹಣ್ಣು, ತರಕಾರಿ ಕ್ಲೀನ್ ಆಗುತ್ತದೆ.