ಈ ಬ್ರಹ್ಮಾಂಡದಲ್ಲಿ ಚಿತ್ರ-ವಿಚಿತ್ರ ಪ್ರಾಣಿ, ಪಕ್ಷಿ, ಕೀಟ, ಜೀವಜಂತುಗಳಿವೆ.
ನಮ್ಮ ಸುತ್ತಮುತ್ತ ಇರುವ ಕೆಲವೊಂದಿಷ್ಟರ ಪರಿಚಯ ನಮಗಿದ್ದರೂ ಹಲವು ಸಂಕುಲಗಳ ಅರಿವೇ ಇರುವುದಿಲ್ಲ.
ಅದರಲ್ಲೂ ಅನೇಕ ವಿಸ್ಮಯಗಳನ್ನ ತನ್ನ ಗರ್ಭದಲ್ಲಿ ಅಡಗಿಸಿ ಇಟ್ಟುಕೊಂಡಿರುವ ಕಾಡು, ನದಿ, ಸಮುದ್ರ ಜೀವಿಗಳ ಬಗ್ಗೆ ನಮ್ಮ ಜ್ಞಾನ ಅಷ್ಟಕ್ಕಷ್ಟೇ ಎನ್ನಬಹುದು. ಏಕೆಂದರೆ, ಪ್ರಕೃತಿ ಅಷ್ಟು ವಿಸ್ಮಯ ಮತ್ತು ನಿಗೂಢ.
ನೆಟ್ಟಗರೊಬ್ಬರು ಅಂತಹುದೇ ವಿಚಿತ್ರವೆನಿಸುವ ಸಮುದ್ರ ಜೀವಿಯೊಂದರ ವಿಡಿಯೋ ಅಪ್ಲೋಡ್ ಮಾಡಿದ್ದು, 2.9 ಲಕ್ಷ ಜನರು ನೋಡಿ, ಕಮೆಂಟಿಸಿ ಶೇರ್ ಕೂಡ ಮಾಡಿದ್ದಾರೆ.
ಒಂದು ಚಿಪ್ಪಿನಂತಹ ಶರೀರದ ಸುತ್ತ ಐದು ಹಗ್ಗದಂತಹ ಬಾಹುಗಳಿವೆ. ಹಗ್ಗದಂತಿರುವ ಬಾಹುಗಳು ಹಾವಿನಂತೆ ಹರಿಯುತ್ತವೆ, ಚಿಪ್ಪಿನಂತಿರುವ ಶರೀರವನ್ನು ತೆವಳಿಕೊಂಡೇ ಒಯ್ಯುವಂತೆ ಕಾಣುತ್ತದೆ. ಅಂಟಿನಂತಹ ದ್ರವ ಹೊರಹಾಕುತ್ತಾ ಚಲಿಸುತ್ತಿದೆ.
ಒಬ್ಬರು ಅನ್ಯಗ್ರಹಜೀವಿ ಏಲಿಯನ್ಸ್ ಎಂದರೆ, ಇನ್ನೊಬ್ಬರು ಇದು 2020 ಹಾಗಾಗಿ……ಎಂದು ಬರೆದುಕೊಂಡಿದ್ದಾರೆ. ಆಮೆಯೊಂದನ್ನು ಐದು ಹಾವುಗಳು ನುಂಗುತ್ತಿರಬಹುದೇ ಎಂದು ಮತ್ತೊಬ್ಬರು ಪ್ರಶ್ನಾರ್ಥಕ ಚಿಹ್ನೆ ಇಟ್ಟರೆ, ಸ್ನೇಕ್ ಸ್ಪೈಡರ್ ಎನ್ನುತ್ತಾ ಮಗದೊಬ್ಬರು ಆಶ್ಚರ್ಯಸೂಚಕ ಚಿಹ್ನೆ ಹಾಕುತ್ತಾರೆ. ಆಕ್ಟೋಪಸ್ ಇರಬಹುದು ಎಂಬುದು ಒಂದಿಷ್ಟು ಮಂದಿಯ ಗೊಂದಲ.
ಕೊನೆಗೂ ನೆಟ್ಟಿಗರೊಬ್ಬರು ಅನುಮಾನ ಬಗೆಹರಿಸಿದ್ದು, ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ನಕ್ಷತ್ರ ಮೀನಿನ ಜಾತಿಯ ಪ್ರಾಣಿಯದು. 2 ಸಾವಿರಕ್ಕೂ ಹೆಚ್ಚು ತಳಿಯ ನಕ್ಷತ್ರ ಮೀನುಗಳಿದ್ದು, ಸಮುದ್ರದಾಳದಲ್ಲಿ 1200 ರಷ್ಟು ಪತ್ತೆಯಾಗಿವೆ. ಅವುಗಳಲ್ಲಿ ಇದೂ ಒಂದು ಜಾತಿ. ಇದರ ಬಾಹುಗಳು 60 ಸೆಂಟಿಮೀಟರ್ ವರೆಗೆ ಬೆಳೆಯುತ್ತದೆ ಎಂಬ ಮಾಹಿತಿಪೂರ್ಣ ಕಮೆಂಟ್ ಹಾಕಿದ್ದಾರೆ.