
ಅಣಬೆಯಾಕಾರದ ಬೃಹತ್ ಮೋಡವೊಂದು ಯುಕ್ರೇನ್ನಲ್ಲಿ ಅಣು ಬಾಂಬ್ನ ಭಯ ಹುಟ್ಟಿಸಿದ ಘಟನೆ ನಡೆದಿದೆ. 1968 ರಲ್ಲಿ ಅಣು ದುರಂತ ಸಂಭವಿಸಿದ ಚರ್ನೋಬಿಲ್ನಿಂದ ಕೇವಲ 60 ಮೈಲಿ ದೂರವಿರುವ ಯುಕ್ರೇನ್ ರಾಜಧಾನಿ ನಗರ ಕೀವ್ನಲ್ಲಿ ಈ ಘಟನೆ ನಡೆದಿದೆ.
ಅಣಬೆಯಂತೆ ಇರುವ ಬಿಳಿ ಮೋಡದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನ ಅದು ಅಣು ಬಾಂಬ್ ಎಂದು ಭಯಗೊಂಡು ಪ್ಯಾನಿಕ್ ಆಗಿದ್ದರು.
ತಕ್ಷಣ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ‘ಇದೊಂದು ಸಾಮಾನ್ಯ ಅನ್ವಿಲ್ ಮೋಡವಾಗಿದೆ. ಈ ಮೊದಲು ಓಬ್ಲಾಸ್ಟ್, ಟೆರ್ನೊಪಿಲ್ ಒಬ್ಲಾಸ್ಟ್ ಮತ್ತು ವಿನಿಟ್ಸಾ ಮುಂತಾದೆಡೆ ಕಾಣಿಸಿತ್ತು’ ಎಂದು ಸ್ಪಷ್ಟನೆ ನೀಡಿದ್ದಾರೆ.
ಕ್ಯುಮುಲೋನಿಂಬಸ್ ಇನ್ಕಸ್ ಮೋಡ ಹಾಗೂ ಅನ್ವಿಲ್ ಒಂದೇ ಆಗಿದೆ. ಭಾರಿ ಗಾಳಿಯ ಪ್ರಭಾವದಿಂದ ನೀರಿನ ಆವಿ ಭೂಮಿಯಿಂದ ಎತ್ತರಕ್ಕೆ ಹೋದಾಗ ಈ ರೀತಿ ಮೋಡಗಳು ಸೃಷ್ಟಿಯಾಗುತ್ತವೆ. ಅಪರೂಪಕ್ಕೊಮ್ಮೆ ಸೃಷ್ಟಿಯಾಗುವ ಇವು ಗುಡುಗು, ಮಿಂಚು, ಆಲಿಕಲ್ಲು ಮಳೆಯನ್ನು ಸೃಷ್ಟಿಸುತ್ತವೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಆದರೆ, ಈ ಸ್ಪಷ್ಟನೆಗೂ ಮುಂಚೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಪ್ರಾರಂಭವಾಗಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಣ್ವಸ್ತ್ರಗಳನ್ನು ಪರೀಕ್ಷೆ ಮಾಡುತ್ತಿದ್ದಾರೆ ಎಂದು ಕೀವ್ ನಗರದ ನಿವಾಸಿ ಮೆಕ್ಸಿಮ್ ವೊಲೊಕಾ ವ್ಯಂಗ್ಯವಾಡಿದ್ದಾರೆ.