ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಭಾರತ – ಚೀನಾ ಯೋಧರ ನಡುವೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಆ ಬಳಿಕ ನಡೆದ ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಭಾರತದ ಭೂಮಿಯನ್ನು ಚೀನಾ ಆಕ್ರಮಿಸಿಲ್ಲ ಎಂದು ಹೇಳಿದ್ದರು.
ಈ ಹೇಳಿಕೆ ಕುರಿತು ಪ್ರತಿಪಕ್ಷಗಳಿಂದ ಟೀಕೆ ವ್ಯಕ್ತವಾಗುತ್ತಲೇ ಸ್ಪಷ್ಟನೆ ನೀಡಿದ್ದ ಪ್ರಧಾನ ಮಂತ್ರಿ ಕಾರ್ಯಾಲಯ, ಪ್ರಧಾನಿಯವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿತ್ತು.
ಇದೀಗ ಆ ವಿಚಾರವನ್ನು ಮತ್ತೆ ಪ್ರಸ್ತಾಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ನೇತೃತ್ವದ ಆಡಳಿತದಲ್ಲಿ ಭಾರತದ ವಿದೇಶಾಂಗ ನೀತಿ ಸಂಪೂರ್ಣ ವಿಫಲವಾಗಿದೆ. ಪ್ರಧಾನಿಯವರ ಈ ಹೇಳಿಕೆ ಚೀನಾವನ್ನು ಸಮರ್ಥಿಸುವಂತಿದೆ ಎಂದು ಹೇಳುವ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.