ಕೊರೊನಾ ಸೋಂಕಿತರ ಸಹಾಯಕ್ಕಾಗಿ ಕೇಂದ್ರ ಸರ್ಕಾರ ‘ಪಿಎಂ ಕೇರ್ಸ್’ ಅಡಿ ನಿಧಿ ಸಂಗ್ರಹ ಆರಂಭಿಸಿದ್ದು, ಇದಕ್ಕೆ ಉದ್ಯಮಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಬಹುತೇಕರು ದೇಣಿಗೆ ನೀಡಿದ್ದರು.
ಆದರೆ ‘ಪಿಎಂ ಕೇರ್ಸ್’ ಹಣದ ಬಳಕೆ ಕುರಿತು ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಇದೀಗ ಮುಖ್ಯವಾದ ಮಾಹಿತಿಯೊಂದು ಹೊರಬಿದ್ದಿದ್ದು, ಕೇಂದ್ರ ಸರ್ಕಾರ ಪಿಎಂ ಕೇರ್ಸ್ ನಿಧಿ ಅಡಿ 50 ಸಾವಿರ ವೆಂಟಿಲೇಟರ್ ಗಳನ್ನು ದೇಶಿಯವಾಗಿ ತಯಾರಿಸಲು ಮುಂದಾಗಿದೆ.
ಈಗಾಗಲೇ 2,923 ವೆಂಟಿಲೇಟರ್ ಗಳನ್ನು ತಯಾರಿಸಲಾಗಿದ್ದು ಈ ಪೈಕಿ 1,340 ವೆಂಟಿಲೇಟರ್ ಗಳನ್ನು ವಿವಿಧ ರಾಜ್ಯಗಳಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಪೈಕಿ ಕರ್ನಾಟಕಕ್ಕೆ 90 ವೆಂಟಿಲೇಟರ್ ಗಳು ದೊರೆತಿವೆ.
ವೆಂಟಿಲೇಟರ್ ತಯಾರಿಕಾ ಯೋಜನೆಗೆ ಕೇಂದ್ರ ಸರಕಾರ 2000 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಈ ತಿಂಗಳ ಅಂತ್ಯದ ವೇಳೆಗೆ 14000 ವೆಂಟಿಲೇಟರ್ ಗಳು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆಯಾಗಲಿದೆ. ಒಟ್ಟು 50 ಸಾವಿರ ವೆಂಟಿಲೇಟರ್ ಗಳನ್ನು ಈ ಯೋಜನೆಯಡಿ ದೇಶೀಯವಾಗಿ ತಯಾರಿಸಲಾಗುತ್ತದೆ.